ಲಖನೌ: ಉತ್ತರ ಪ್ರದೇಶ ಉಗ್ರ ನಿಗ್ರಹ ಪಡೆ(ಎಟಿಎಸ್) ಬುಧವಾರ ಫೈಜಾಬಾದ್ನಲ್ಲಿ ಶಂಕಿತ ಐಎಸ್ಐ ಏಜೆಂಟ್ ನನ್ನು ಬಂಧಿಸಿದೆ ಮತ್ತು ವಿಚಾರಣೆಗಾಗಿ ಮತ್ತೊಬ್ಬನನ್ನು ವಶಕ್ಕೆ ಪಡೆದಿದೆ.
ಗುಪ್ತಚರ ಮಾಹಿತಿ ಆಧರಿಸಿ ಇಂದು ಎಟಿಎಸ್ ಪೊಲೀಸರು ಹಾಗೂ ಸೇನಾ ಗುಪ್ತಚರ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಐಎಸ್ಐ ಏಜೆಂಟ್ನನ್ನು ಗಾಜಿಯಾಬಾದ್ನಿಂದ ಸುಮಾರು 120 ಕಿ.ಮೀ. ದೂರವಿರುವ ಫೈಜಾಬಾದ್ನಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿ ಅಫ್ತಾಬ್ ಅಲಿ ಎಂದು ಗುರುತಿಸಲಾಗಿದೆ.
ಪಾಕಿಸ್ತಾನದ ಐಎಸ್ಐ ನಿಂದ ತರಬೇತಿ ಪಡೆದಿದ್ದ ಅಫ್ತಾಬ್ ಭಾರತದಲ್ಲಿ ನಿಯೋಜಿತನಾಗಿದ್ದ. ಈತ ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಫ್ತಾಬ್ ವಿರುದ್ಧ ಸಾಕಷ್ಟು ಸಾಕ್ಷಾಧಾರಗಳನ್ನು ಕಲೆ ಹಾಕಲಾಗಿದ ಮತ್ತು ಈ ಸಂಬಂಧ ಓರ್ವನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಟಿಎಸ್ನ ಐಜಿ ಅಸೀಮ್ ಅರುಣ್ ಅವರು ತಿಳಿಸಿದ್ದಾರೆ.