ನವದೆಹಲಿ: ಛತ್ತೀಸ್ಗಢದ ಸುಕ್ಮಾದಲ್ಲಿ ನಕ್ಸಲರು ದಾಳಿ ನಡೆಸಿದ್ದಾಗ ಸಿಆರ್ ಪಿಎಫ್ ಪಡೆಗಳು ಇಬ್ಬರು ನಕ್ಸಲ್ ಕಮಾಂಡರ್ ಗಳನ್ನು ಹೊಡೆದುರುಳಿಸಿತ್ತು ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಸುಕ್ಮಾ ದಾಳಿ ನಡೆದ ಬಳಿಕ ಸಿಆರ್'ಪಿಎಫ್ ಪಡೆ ಹಾಗೂ ಪೊಲೀಸರು ಈ ವರೆಗೂ 11 ಶಂಕಿರತನ್ನು ವಿಚಾರಣೆಗೊಳಪಡಿಸಿದ್ದು. 11 ಜನರಲ್ಲಿ ಹಲವರು ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ ವಿಚಾರಣೆ ಮುಂದುವರೆದಿದ್ದು, ವಿಚಾರಣೆ ಮುಂಗಿದ ಬಳಿಕ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಅಭಿಷೇಕ್ ಮೀನಾ ಅವರು ತಿಳಿಸಿದ್ದಾರೆ.
ಬುರ್ಕಾಪಾಲ್ ಘಟನೆಯಲ್ಲಿ ಇಬ್ಬರು ನಕ್ಸಲ್ ಕಮಾಂಡರ್ ಗಳು ಸಾವನ್ನಪ್ಪಿದ್ದರು ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಪಿಟ್ಟಿದ್ದಾರೆ. ಹತ್ಯೆಯಾದವರನ್ನು ಅನಿಲ್ ಹಾಗೂ ರವಿ ಎಂದು ಹೇಳಲಾಗುತ್ತಿದೆ.
ಅನಿಲ್ ಬಿಜಾಪುರ್ ಜಿಲ್ಲೆಯ ಉಸೂರ್ ಪ್ರದೇಶದ ನಿವಾಸಿಯಾಗಿದ್ದು, ರವಿ ತೆಲಂಗಾಣ ರಾಜ್ಯದ ಮೂಲದವರಾಗಿದ್ದಾನೆ. ವಿಚಾರಣೆ ವೇಳೆ ಇನ್ನಿತರೆ ಸ್ಫೋಟಕ ಮಾಹಿತಿಗಳನ್ನು ಶಂಕಿತರು ಹೊರಹಾಕಿದ್ದಾರೆಂದು ಅಭಿಷೇಕ್ ಅವರು ತಿಳಿಸಿದ್ದಾರೆ.
ಛತ್ತೀಸ್ಗಢ ರಾಜ್ಯದ ಸುಕ್ಮಾದ ರಸ್ತೆಯೊಂದರಲ್ಲಿ ಕಾರ್ಮಿಕರು ಕಾಮಗಾರಿ ಕಾರ್ಯವನ್ನು ಮಾಡುತ್ತಿದ್ದ ವೇಳೆ 150ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಕಾರ್ಮಿಕರಿಗೆ ಭದ್ರತೆಯನ್ನು ಒದಗಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ 300ಕ್ಕೂ ಹೆಚ್ಚು ನಕ್ಸಲರು ಏಕಾಏಕಿ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ 25 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.