ದೇಶ

ಮಾವಿನ ತಳಿಗೆ ಉತ್ತರ ಪ್ರದೇಶ ಸಿಎಂ "ಯೋಗಿ" ಹೆಸರು!

Srinivasamurthy VN

ಲಖನೌ: ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಸಿಎಂ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆ ದುಪ್ಪಟಾಗಿದ್ದು, ಇದೀಗ ಅವರ​ ಹೆಸರಿನಲ್ಲಿ ಮಾವಿನ ತಳಿಯೊಂದು ಮಾರುಕಟ್ಟೆಗೆ ಬಂದಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಾಗಿನಿಂದಲೂ ಯೋಗಿ ಆದಿತ್ಯನಾಥ್​ ಜನಪ್ರಿಯತೆ ಹೆಚ್ಚಾಗಿದ್ದು, ಇದೇ ಕಾರಣಕ್ಕೆ ಮಾವು ಬೆಳೆಗಾರರು ತಮ್ಮ ವಿಶೇಷ ತಳಿಯೊಂದಕ್ಕೆ ಯೋಗಿ ಹೆಸರನ್ನಿಟ್ಟಿದ್ದಾರೆ. ಲಖನೌ ಸಮೀಪದ  ಮಲಿಹಾಬಾದ್​ನ ಹಾಜಿ ಕಲಿಮುಲ್ಲಾ ಎಂಬುವವರು ತಾವು ಬೆಳೆದಿರುವ ಹೊಸ ಮಾವಿನ ತಳಿಗೆ ಯೋಗಿ ಆದಿತ್ಯನಾಥ್​ ಅವರ ಹೆಸರನ್ನು ಇಟ್ಟಿದ್ದಾರೆ.

ಮೂಲಗಳ ಪ್ರಕಾರ ಪ್ರತಿ ಬಾರಿಯೂ ಹೊಸ ಬಗೆಯ ಮಾವಿನ ತಳಿಗಳನ್ನು ಮಾರುಕಟ್ಟೆಗೆ ಪರಿಚಯಿಸುವುದು 74 ವರ್ಷದ ಮಾವು ಬೆಳೆಗಾರ ಕಲಿಮುಲ್ಲಾ ಅವರ ಹವ್ಯಾಸವಾಗಿದ್ದು, ಹೀಗೆ ಕಳೆದ ವರ್ಷ ಬೆಳೆದಿದ್ದ ಹೊಸ ತಳಿಗೆ  ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಇಡುವ ಮೂಲಕ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೇ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಹಾಗೂ ಸಚಿನ್ ತೆಂಡೂಲ್ಕರ್​ ಹೆಸರಿನಿಂದ ಹೊಸ ಮಾವಿನ ತಳಿಯನ್ನು ಇತ್ತೀಚೆಗೆ  ಪರಿಚಯಿಸಿದ್ದರು. ತಮ್ಮ ವಿನೂತನ ಪ್ರಯೋಗ ಮತ್ತು ಕೃಷಿ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗಾಗಿ ಕಲಿಮುಲ್ಲಾ ಪದ್ಮಶ್ರೀ ಪ್ರಶಸ್ತಿ ಕೂಡ ಪಡೆದಿದ್ದಾರೆ.

ಇದೀಗ ಯೋಗಿ ಆದಿತ್ಯಾನಾಥ್ ಹೆಸರಿನಲ್ಲಿ ಮಾವಿನ ತಳಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಹೊಸ ತಳಿಯ ಮಾವಿನ ಹಣ್ಣು ತುಂಬಾ ಸಿಹಿಯಾಗಿದ್ದು, ಜನರು ಇಷ್ಟಪಡುತ್ತಾರೆ. ಇದು ದಸ್ಹೇರಿ ತಳಿಯ ಹೈಬ್ರಿಡ್ ಮಾವಾಗಿದ್ದು,  ನೈಸರ್ಗಿಕವಾಗಿ ಹೆಚ್ಚಿನ ಖರ್ಚಿಲ್ಲದೇ ಬೆಳಯಬಹುದಾಗಿದೆ ಎಂದು ಕಲೀಮುಲ್ಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಮಲಿಹಾಬಾದ್ ನಲ್ಲಿರುವ ಸುಮಾರು 5 ಎಕರೆ ಪ್ರದೇಶದಲ್ಲಿ 1957ರಿಂದಲೂ ಕಲಿಮುಲ್ಲಾ ಮಾವು ಬೆಳೆಯುತ್ತಿದ್ದು, ಈ ವರೆಗೂ ಸುಮಾರು 300ಕ್ಕೂ ಅಧಿಕ ತಳಿಗಳನ್ನು ಬೆಳೆದ ಖ್ಯಾತಿಗೆ ಪಾತ್ರರಾಗಿದ್ದಾರೆ.

SCROLL FOR NEXT