ಎಸಿಬಿಗೆ ದಾಖಲೆ ನೀಡಿದ ದಾಖಲೆ ಪ್ರದರ್ಶಿಸುತ್ತಿರುವ ಕಪಿಲ್ ಮಿಶ್ರ
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಸೋಮವಾರ ಹೊಸ ಬಾಂಬ್ ಸಿಡಿಸಿರುವ ದೆಹಲಿ ಮಾಜಿ ಸಚಿವ ಕಪಿಲ್ ಮಿಶ್ರಾ ಅವರು, ಕೇಜ್ರಿವಾಲ್ ಅವರ ಸಂಬಂಧಿಗಾಗಿ ಆರೋಗ್ಯ ಹಾಗೂ ಲೋಕೋಪಯೋಗಿ ಸಚಿವ ಸತ್ಯೇಂದ್ರ ಜೈನ್ ಅವರು ಸುಮಾರು 50 ಕೋಟಿ ರುಪಾಯಿಯ ಡೀಲ್ ಕುದುರಿಸಿದ್ದರು ಎಂದು ಆರೋಪಿಸಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಿಶ್ರಾ, ಸತ್ಯೇಂದ್ರ ಜೈನ್ ಅವರು ಅರವಿಂದ್ ಕೇಜ್ರಿವಾಲ್ ಅವರ ಭಾವನಿಗಾಗಿ ಛತ್ತರ್ ಪುರದಲ್ಲಿ 50 ಕೋಟಿ ರುಪಾಯಿ ಮೌಲ್ಯದ 7 ಎಕರೆ ಫಾರ್ಮ್ ಹೌಸ್ ಡೀಲ್ ಕುದುರಿಸಿದ್ದರು ಎಂದು ಆರೋಪಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಬೆಂಬಲಿಗರಿಂದ ನನಗೆ ಬೆದರಿಕೆ ಇದ್ದು, ಯಾವ ಬೆದರಿಕೆಗೂ ನಾನು ಬಗ್ಗಲ್ಲ. ಇಂದು 400 ಕೋಟಿ ರುಪಾಯಿ ನೀರಿನ ಟ್ಯಾಂಕರ್ ಹಗರಣಕ್ಕೆ ಸಂಬಂಧಿಸಿದಂತೆ ಎಸಿಬಿಗೆ ದಾಖಲೆ ನೀಡಿದ್ದು, ನಾಳೆ ಸಿಬಿಐಗೂ ನೀಡುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ತಮ್ಮ ಆರೋಪಗಳ ಹಿಂದೆ ಬಿಜೆಪಿ ಕೈವಾಡವಿದೆ ಎಂಬುದನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಮಿಶ್ರಾ, ನಾನು ಎಪಿಯಲ್ಲಿ ಬಿಜೆಪಿಯನ್ನು ಕಟುವಾಗಿ ಟೀಕಿಸುವ ವ್ಯಕ್ತಿ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದಲ್ಲಿ ನಾಲ್ಕುರಿಂದ ಐದು ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಟೆಂಡರ್ ಡೀಲ್ ಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಅಲ್ಲದೆ ತಮ್ಮನ್ನು ಪಕ್ಷದಿಂದ ಹೊರ ಹಾಕಲು ಯತ್ನಿಸಲಾಗುತ್ತಿದೆ. ಆದರೆ ತಾವು ಯಾವುದೇ ಕಾರಣಕ್ಕೂ ಎಎಪಿ ತೊರೆಯುವುದಿಲ್ಲ ಎಂದು ಮಾಜಿ ಸಚಿವ ತಿಳಿಸಿದ್ದಾರೆ.
ನಿನ್ನೆಯಷ್ಟೆ ಆರೋಗ್ಯ ಹಾಗೂ ಲೋಕೋಪಯೋಗಿ ಸಚಿವ ಸತ್ಯೇಂದರ್ ಜೈನ್ ಅವರು ಕೇಜ್ರಿವಾಲ್ ಅವರಿಗೆ ಅವರ ಮನೆಯಲ್ಲಿಯೇ ಎರಡು ಕೋಟಿ ರುಪಾಯಿ ಹಣ ನೀಡಿದ್ದನ್ನು ತಾವು ನೋಡಿದ್ದಾಗಿ ಹೇಳಿದ್ದ ಮಿಶ್ರಾ, ಇಂದು ನೀರಿನ ಟ್ಯಾಂಕರ್ ಹಗರಣ ಸಂಬಂಧ ಕೇಜ್ರಿವಾಲ್ ವಿರುದ್ಧ ಎಸಿಬಿಗೆ ದಾಖಲೆಗಳನ್ನು ನೀಡಿದ್ದಾರೆ.