ಮುಂಬೈ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಸಾಬೀತಾದರೆ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕೇಜ್ರಿವಾಲ್ ಅವರ ಗುರು ಹಾಗೂ ಭ್ರಷ್ಟಾಚಾರ ವಿರೋಧಿ ನಾಯಕ ಅಣ್ಣಾ ಹಜಾರೆ ಅವರು ಮಂಗಳವಾರ ಹೇಳಿದ್ದಾರೆ.
ಈ ಮುಂಚೆ ಕೇಜ್ರಿವಾಲ್ ಸಂಪುಟದಿಂದ ವಜಾಗೊಂಡ ಕಪಿಲ್ ಮಿಶ್ರಾ ಅವರು ದೆಹಲಿ ಸಿಎಂ ವಿರುದ್ಧ ಭ್ರಷ್ಟಾಚಾರದ ಆರೋಪದಿಂದ 'ದುಃಖೀತನಾಗಿದ್ದೇನೆ' ಎಂದಷ್ಟೇ ಹೇಳಿದ್ದ ಹಜಾರೆ ಅವರು, ಸಚಿವ ಸ್ಥಾನದಿಂದ ವಜಾಗೊಂಡ ಬಳಿಕವೇ ಕಪಿಲ್ ಮಿಶ್ರಾ ಅವರ ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವುದನ್ನು ಗಮನಿಸಬೇಕು ಎಂದು ಹೇಳಿದ್ದರು.
ಈಗ ದೆಹಲಿ ಸಿಎಂ ವಿರುದ್ಧ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಣ್ಣಾ ಹಜಾರೆ ಅವರು, ಕೇಜ್ರಿವಾಲ್ ವಿರುದ್ಧದ ಆರೋಪಗಳ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕು. ಒಂದೊಮ್ಮೆ ಆತ ಭ್ರಷ್ಟನೆಂದು ಸಾಬೀತಾದರೆ ಆತನ ಪದುಚ್ಯತಿಯನ್ನು ಆಗ್ರಹಿಸಿ ನಾನು ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ ಎಂದು ಗುಡುಗಿದ್ದಾರೆ.