ದೇಶ

ವರದಕ್ಷಿಣೆ ಕೇಳಿದ ಗಂಡನಿಗೆ ತಲಾಖ್ ನೀಡಿದ ಮುಸ್ಲಿಂ ಮಹಿಳೆ!

Srinivasamurthy VN

ಲಖನೌ: ವರದಕ್ಷಿಣೆ ಹಾಗೂ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಉತ್ತರ ಪ್ರದೇಶದ ಮಹಿಳೆಯೊಬ್ಬರು ತಮ್ಮ ಪತಿಗೆ ತಲಾಖ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ಷರಿಯಾ ಕಾನೂನಿನ ಮೂಲಕ ಮಹಿಳೆ ತನ್ನ ಪತಿಗೆ ತಲಾಖ್ ನೀಡಿದ್ದಾಳೆ. ಮಹಿಳೆ ಆರೋಪಿಸಿರುವಂತೆ ಮದುವೆಯಾದಾಗಿನಿಂದಲೂ ಪತಿ ಮತ್ತು ಆತನ ಸಹೋದರರು  ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಇತ್ತೀಚೆಗೆ ತಮಗೆ ಹೆಣ್ಣುಮಗುವಾಗಿದ್ದು, ಇದು ಪತಿ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಹೀಗಾಗಿ ಮತ್ತೆ ಕಿರುಕುಳ ನೀಡಲು ಆರಂಭಿಸಿದರು. ಹೀಗಾಗಿ ಬೇರೆ ಮಾರ್ಗವಿಲ್ಲದೇ ತಲಾಖ್ ನೀಡಿದ್ದೇನೆ  ಎಂದು ಮಹಿಳೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ನನ್ನ ಪತಿಗೆ ನನ್ನ ಮೇಲಾಗಲಿ ಅಥವಾ ನಮ್ಮ ಮಗುವಿನ ಮೇಲಾಗಲಿ ಎಳ್ಳಷ್ಟೂ ಪ್ರೀತಿ ಇರಲಿಲ್ಲ. ಮದುವೆಯಾಗಿ 6 ವರ್ಷಗಳೇ ಕಳೆದರೂ ಒಂದು ಬಾರಿಯೂ ಪ್ರೀತಿಯಿಂದ ನೋಡಿರಲಿಲ್ಲ. ಪ್ರತೀದಿನ ಮನೆಯಲ್ಲಿ ವರದಕ್ಷಿಣೆಗಾಗಿ  ಪತಿ ಮನೆಯವರು ಜಗಳ ತೆಗೆಯುತ್ತಿದ್ದರು. ಪತಿಯ ಸಹೋದರರು ವಿನಾಕಾರಣ ಕಿರುಕುಳ ನೀಡುತ್ತಿದ್ದರು. ಹೆಣ್ಣು ಮಗು ಜನಿಸಿದ ಮೇಲಂತೂ ಪತಿ ನನ್ನಿಂದ ದೂರವಿದ್ದರು. ಹೀಗಾಗಿ ಇವರ ಕಿರುಕುಳ ತಾಳಲಾರದೆ ನಾನು ನನ್ನ  ಪೋಷಕರ ಮನೆಗೆ ವಾಪಸ್ ಆಗಿದ್ದೆ. ಹಿರಿಯರಲ್ಲಿ ನನ್ನ ಸಮಸ್ಯೆ ಹೇಳಿಕೊಂಡು ಅಂತಿಮವಾಗಿ ತಲಾಖ್ ಗೆ ನಿರ್ಧರಿಸಿದ್ದೇವೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಕೂಡ ದಾಖಲಿಸಿರುವ ಮಹಿಳೆ ಪತಿ ಕುಟುಂಬದಿಂದ ತಮಗೆ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ.

SCROLL FOR NEXT