ಪಾಕ್ನಿಂದ ಭಾರತೀಯ ಯೋಧರ ಹತ್ಯೆ: ಮೋದಿಗೆ ಬ್ಲೌಸ್ ಕಳುಹಿಸಿದ ಮಾಜಿ ಯೋಧನ ಪತ್ನಿ
ಭಾರತೀಯ ಯೋಧರ ಮೇಲೆ ಪಾಕಿಸ್ತಾನ ನಡೆಸುತ್ತಿರುವ ದಾಳಿಗಳಿಂದ ಆಕ್ರೋಶಗೊಂಡ ಮಾಜಿ ಯೋಧರ ಪತ್ನಿಯೊಬ್ಬರು ಪ್ರಧಾನಿ ಮೋದಿ ಅವರಿಗೆ 56 ಇಂಚಿನ...
ನವದೆಹಲಿ: ಭಾರತೀಯ ಯೋಧರ ಮೇಲೆ ಪಾಕಿಸ್ತಾನ ನಡೆಸುತ್ತಿರುವ ದಾಳಿಗಳಿಂದ ಆಕ್ರೋಶಗೊಂಡ ಮಾಜಿ ಯೋಧರ ಪತ್ನಿಯೊಬ್ಬರು ಪ್ರಧಾನಿ ಮೋದಿ ಅವರಿಗೆ 56 ಇಂಚಿನ ಬ್ಲೌಸ್ ಕಳಿಸಿರುವುದಾಗಿ ವರದಿಯಾಗಿದೆ.
ಪ್ರಧಾನಿ ಮೋದಿ ಅವರು ತಮ್ಮದು 56 ಇಂಚಿನ ಎದೆ ಎಂದು ಶೌರ್ಯದಿಂದ ಹೇಳುತ್ತಾರೆ ಆದರೆ ಪಾಕಿಸ್ತಾನದ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಹೀಗಾಗಿ ಅವರಿಗೆ 56 ಇಂಚಿನ ಬ್ಲೌಸ್ ಕಳಿಸಿರುವುದಾಗಿ ಮಾಜಿ ಯೋಧ ಧರಂವೀರ್ ಸಿಂಗ್ ಅವರು ಪತ್ನಿ ಸುಮನ್ ಸಿಂಗ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಪ್ರಚಾರ ವೇಳೆ ಮೋದಿ ಅವರು ನಾನು ಪ್ರಧಾನಿಯಾದರೆ ಪಾಕಿಸ್ತಾನವು ಭಾರತೀಯ ಯೋಧರ ಮೇಲೆ ದಾಳಿ ನಡೆಸುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಪರಿಸ್ಥಿತಿ ಇನ್ನಷ್ಟು ಕೆಟ್ಟಿದೆ ಎಂದು ಸುಮನ್ ಅವರು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನ ಸೈನಿಕರು ಭಾರತೀಯ ಯೋಧರ ಹತ್ಯೆ ನಡೆಸುತ್ತಿರುವುದರಿಂದ ಬಹಳಷ್ಟು ಆಕ್ರೋಶಗೊಂಡಿರುವ ಸುಮನ್ ಸಿಂಗ್ ಅವರು ತಮ್ಮ ನೋವನ್ನು ಹೊರಹಾಕಿದ್ದಾರೆ. ಮಹಿಳೆಯರು ಪತಿ, ಮಗ ಸಹೋದರರನ್ನು ಸೇನೆಗೆ ಕಳುಹಿಸುತ್ತಾರೆ ಆದರೆ ತಲೆಯಿಲ್ಲದ ದೇಹಗಳು ಅವರಿಗೆ ವಾಪಸ್ ಸಿಗುತ್ತಿವೆ. ಹೀಗಿರುವಾಗ 56 ಇಂಚಿನ ಎದೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.