ಹೈದರಾಬಾದ್: ಹಳೆ ಹೈದರಾಬಾದ್ ಮಿನಿ ಪಾಕಿಸ್ತಾನ ಇದ್ದಂತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ತೆಲಂಗಾಣದ ಬಿಜೆಪಿ ಶಾಸಕ ರಾಜಾಸಿಂಗ್ ಲೋಧ ವಿರುದ್ಧ ದೂರು ದಾಖಲಾಗಿದೆ.
ಹೈದರಾಬಾದ್ ನಗರದ ಗೋಶಾಮಹಲ್ ಕ್ಷೇತ್ರದ ಎಂಎಲ್‌ಎ ರಾಜಾಸಿಂಗ್ ಲೋಧ ಟಿವಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ರೀತಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.
ಹಳೆ ಹೈದರಾಬಾದ್ ಮಿನಿ ಪಾಕಿಸ್ತಾನ ಇದ್ದಂತೆ. ಇಲ್ಲಿ ಸಂವಿಧಾನ ಮತ್ತು ಕಾನೂನಿಗೆ ಜನತೆ ಆದ್ಯತೆಯನ್ನೇ ಕೊಡುತ್ತಿಲ್ಲ ಎಂದಿದ್ದಾರೆ. ಅಲ್ಲದೇ 'ತಾವು ಇತರ ಶಕ್ತಿಗಳ ವಿರುದ್ಧ ಹೋರಾಡಲು ಒಂದು ಯುವಕರ ಪಡೆಯನ್ನು ಸಜ್ಜುಗೊಳ್ಳಿಸುತ್ತಿದ್ದು, ಅವರಿಗೆ ಆಯುಧಗಳನ್ನು ನೀಡಿ ತರಬೇತಿ ನೀಡಲಾಗುತ್ತಿದೆ ಎಂದೂ ಸಹ ಹೇಳಿದ್ದರು.
ರಾಜಾಸಿಂಗ್ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದಂತೆ ಪೊಲೀಸರು ಅವರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಹಳೆ ನಗರದಲ್ಲಿರುವ ಮಿರ್ ಚೌಕ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153-ಎ ಅಡಿಯಲ್ಲಿ ರಾಜಾಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರಾಜಾಸಿಂಗ್ ಸಂದರ್ಶನವು ಪ್ರಚೋದನಕಾರಿ ಹಾಗೂ ಸಾರ್ವಜನಿಕರಲ್ಲಿ ದ್ವೇಷವನ್ನು ಉತ್ತೇಜಿಸುತ್ತದೆ. ಶಾಂತಿ, ಕೋಮು ಸಾಮರಸ್ಯದ ಧಕ್ಕೆಗೆ ಕಾರಣವಾಗುತ್ತದೆ ಎಂದು ಉಪ ಪೊಲೀಸ್ ಆಯುಕ್ತ ವಿ.ಸತ್ಯನಾರಾಯಣ ತಿಳಿಸಿದ್ದಾರೆ.