ರೊಹ್ಟಕ್; ಹರಿಯಾಣ ರಾಜ್ಯದ ರೊಹ್ಟಕ್ ನಲ್ಲಿ ಮಲತಂದೆಯಿಂದಲೇ ಅತ್ಯಾಚಾರಕ್ಕೊಳಗಾದ 10 ವರ್ಷದ ಬಾಲಕಿ ಇದೀಗ 5 ತಿಂಗಳಿ ಗರ್ಭಿಣಿಯಾಗಿದ್ದು, ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರಿ ಬಾಲಕಿಯ ತಾಯಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಕುಟುಂಬದಲ್ಲಿ ಆರ್ಥಿಕ ಸಮಸ್ಯೆಯಿದ್ದು, ಈಗಾಗಲೇ ಮನೆಯಲ್ಲಿ ನಾಲ್ಕು ಮಕ್ಕಳಿದ್ದಾರೆ. ಹುಟ್ಟುವ ಮಗುವನ್ನು ಬೆಳೆಸಲು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ಬಾಲಕಿಯ ತಾಯಿ ನ್ಯಾಯಾಲಯದ ಮುಂದೆ ವಿನಂತಿಸಿಕೊಂಡಿದ್ದಾರೆ. ಈ ಕುರಿತ ಅರ್ಜಿಯನ್ನು ನ್ಯಾಯಾಲಯ ಇಂದು ಪರಿಶೀಲನೆ ನಡೆಸಲಿದೆ.
ಬಾಲಕಿಯ ಮಲತಂದೆಯೇ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಮಾಡುವ ಮೂಲಕ ಆಕೆ ಗರ್ಭ ಧರಿಸುವಂತೆ ಮಾಡಿದ್ದು, ಐದು ತಿಂಗಳ ಗರ್ಭಿಣಿ ಬಾಲಕಿ ಸ್ಥಿತಿ ಇದೀಗ ಗಂಭೀರವಾಗಿದೆ.
ಕೆಲ ದಿನಗಳಿಂದ ಬಾಲಕಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಹೊಟ್ಟೆ ನೋವು, ಜ್ವರದಿಂದಾಗಿ ಬಳಲುತ್ತಿದ್ದ ಬಾಲಕಿಯನ್ನು ತಾಯಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಬಾಲಕಿ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇದೀಗ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾಮುಕ ಮಲತಂದೆಯನ್ನು ಬಂಧನಕ್ಕೊಳಪಡಿಸಿದ್ದಾರೆ.