ದೇಶ

ಬಿಹಾರ: ಎನ್'ಕೌಂಟರ್'ನಲ್ಲಿ ಕುಖ್ಯಾತ ಗ್ಯಾಂಗ್'ಸ್ಟರ್ ರಜೀತ್ ಡಾನ್ ಸಾವು

Manjula VN
ಪಾಟ್ನ: ಬಿಹಾರ ರಾಜ್ಯದ ಮಧುಬಾನಿ ಜಿಲ್ಲೆಯಲ್ಲಿ ಎನ್ ಕೌಂಟರ್ ನಡೆಸಲಾಗಿದ್ದು, ಕುಖ್ಯಾತ ಗ್ಯಾಂಗ್ ಸ್ಟರ್ ರಂಜೀತ್ ಡಾನ್ ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ಗುರುವಾರ ತಿಳಿದುಬಂದಿದೆ. 
ರಂಜಿತ್ ಡಾನ್ (50) ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಪೊಲೀಸರ ಕೈಗೆ ಸಿಗದಂತೆ ಕಳೆದ 6 ವರ್ಷಗಳಿಂದಲೂ ತಲೆ ಮರೆಸಿಕೊಂಡಿದ್ದ. ಆರೋಪಿ ಕುರಿತಂತೆ ಸುಳಿವು ನೀಡಿದವರಿಗೆ ರೂ.50,000 ಬಹುಮಾನ ನೀಡುವುದಾಗಿ ಪೊಲೀಸರು ಈ ಹಿಂದೆ ಘೋಷಣೆ ಕೂಡ ಮಾಡಿದ್ದರು.
ಮಧುಬಾನಿ ಜಿಲ್ಲೆ ಗೊಬ್ರಾಹಿ ಗ್ರಾಮದಲ್ಲಿ ಅಪರಾಧ ಕೃತ್ಯವೆಸಗಲು ರಂಜಿತ್ ಯೋಜನೆ ರೂಪಿಸುತ್ತಿದ್ದಾನೆಂಬ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪೊಲೀಸರು ಹಾಗೂ ವಿಶೇಷ ಕಾರ್ಯಪಡೆ ಜಂಟಿಯಾಗಿ ಕಾರ್ಯಾಚರಣೆಗಿಳಿದಿತ್ತು. ಇದಂರಂತೆ ರಂಜಿತ್ ಅಡಗಿ ಕುಳಿತಿದ್ದ ಸ್ಥಳವನ್ನು ಪೊಲೀಸರು ಸುತ್ತವರೆದು ಎನ್ ಕೌಂಟರ್ ನಡೆಸಿದ್ದಾರೆಂದು ತಿಳಿದುಬಂದಿದೆ. 
ಸ್ಥಳವನ್ನು ಸುತ್ತುವರೆದ ಪೊಲೀಸರು ಶರಣಾಗುವಂತೆ ರಂಜಿತ್'ಗೆ ತಿಳಿಸಿದ್ದಾರೆ. ಆದರೆ, ಇದಕ್ಕೆ ಒಪ್ಪದ ರಂಜಿತ್ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾನೆ. ತದನಂತರ ಪೊಲೀಸರು ಆತ್ಮರಕ್ಷಣೆಗಾಗಿ ಎನ್ ಕೌಂಟರ್ ನಡೆಸಿ ರಂಜಿತ್ ನನ್ನು ಹತ್ಯೆ ಮಾಡಿದ್ದಾರೆ. ಸ್ಥಳದಲ್ಲಿ ಕೆಲ ಶಸ್ತ್ರಾಸ್ತ್ರಗಳು ಹಾಗೂ ಜೀವಂತ ಸಿಡಿಮದ್ದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ದೀಪಕ್ ಬರ್ನ್'ವಾಲ್ ಅವರು ತಿಳಿಸಿದ್ದಾರೆ. 
ಎನ್ ಕೌಂಟರ್ ವೇಳೆ ರಂಜಿತ್ ಜೊತೆಗೆ ಮತ್ತೆ ಮೂವರು ಆರೋಪಿಗಳು ಕೂಡ ಇದ್ದರು. ಸ್ಥಳದಲ್ಲಿ ಇಟ್ಟಿಗೆಗಳು ಇದ್ದ ಕಾರಣ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. 
SCROLL FOR NEXT