ಶಾಹಿ ಇಮಾಮ್ ಮೌಲಾನಾ ನೂರ್-ಉರ್-ರೆಹಮಾನ್ ಬರ್ಕಾತಿ
ನವದೆಹಲಿ: ದೇಶ ವಿರೋಧಿ ಹೇಳಿಕೆ ನೀಡಿದ್ದ ಕೋಲ್ಕತಾದ ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ಮೌಲಾನಾ ನೂರ್-ಉರ್-ರೆಹಮಾನ್ ಬರ್ಕಾತಿ ಅವರನ್ನು ಮಸೀದಿಯ ಆಡಳಿತ ಮಂಡಳಿ ಹುದ್ದೆಯಿಂದ ವಜಾಗೊಳಿಸಿರುವುದಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಮೀಮ್ ಅಫ್ಜಲ್ ಅವರು, ಇಮಾಮ್ ಎಂದು ಕರೆಯಲು ಬರ್ಕಾತಿ ಅರ್ಹರಲ್ಲ. ಅವರು ನೀಡಿರುವ ಪ್ರಚೋದಿತ ಹೇಳಿಕೆಗಳನ್ನು ನೋಡಿದರೆ ಅವರನ್ನು ಇಮಾಮ್ ಎಂದು ಕರೆಯಬಾರದು. ಇಮಾಮ್ ಆಗಿದ್ದು ಅವರು ರಾಜಕೀಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬರ್ಕಾತಿ ವಜಾ ಸರಿಯಾದ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.
ಕೋಲ್ಕತಾ ಟಿಪ್ಪು ಸುಲ್ತಾನ್ ಮಸೀದಿಯ ವಿವಾದಿತ ಮೌಲ್ವಿ ನೂರ್ ಉರ್ ರೆಹಮಾನ್ ಬರ್ಕಾತಿ ಅವರು ನೀಡಿದ್ದ ದೇಶ ವಿರೋಧಿ ಹೇಳಿಕೆ ಹಾಗೂ ಸ್ಥಾನಮಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪದ ಮೇರೆಗೆ ನಿನ್ನೆಯಷ್ಟೇ ಮಸೀದಿಯಿಂದ ವಜಾ ಮಾಡಲಾಗಿತ್ತು.
ಇತ್ತೀಚೆಗೆ ಬರ್ಕಾತಿಯವರು ನಿಷೇಧದ ನಡುವೆಯೂ ಕಾರಿನ ಮೇಲೆ ಕೆಂಪು ದೀಪ ಹಾಕಿ ಓಡಾಡಿದ್ದರು. ಮಸೀದಿ ಹೊರಗೆ ಜೈಶ್ರೀರಾಂ ಎನ್ನುವವರು ಹಿಜಡಾಗಳು, ಬಿಜೆಪಿ ಸೇರುವ ಮುಸ್ಲಿಮರನ್ನು ಥಳಿಸುವೆ ಎಂದು ಹೇಳಿದ್ದರು. ಅಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆಯೂ ಕೀಳು ಮಟ್ಟದ ಹೇಳಿಕೆಯನ್ನು ನೀಡಿದ್ದರು. ಆದರೆ, ನನ್ನನ್ನು ವಜಾಗೊಳಿಸಿರುವ ಕ್ರಮ ಕಾನೂನುಬದ್ಧವಲ್ಲ. ನಾನು ಹುದ್ದೆ ಬಿಡಲ್ಲ ಎಂದು ಹೇಳಿದ್ದರು.