ದೇಶ

ಅಮೆರಿಕಾದಿಂದ ಫಿರಂಗಿ ಬಂದೂಕು: ಭಾರತಕ್ಕೆ ಬಂದ ಮೊದಲೆರಡು ಹೊವಿಟ್ಜರ್‌ ಗನ್ ಗಳು

Srinivas Rao BV
ನವದೆಹಲಿ: 1980 ರ ನಂತರ ಭಾರತ ಮೊದಲ ಬಾರಿಗೆ ಫಿರಂಗಿ ಬಂದೂಕು (ಆರ್ಟಿಲರಿ ಗನ್) ಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, 155 ಎಂಎಂ ಆರ್ಟಿಲರಿ ಗನ್ ಗಳಾದ ಎಂ777 ಹಗುರ ಫಿರಂಗಿ ಬಂದೂಕುಗಳು ಅಮೆರಿಕಾದಿಂದ ಭಾರತಕ್ಕೆ ಬಂದಿವೆ. 
ಎರಡು ಹೊವಿಟ್ಜರ್‌ ಗಳು ಚಾರ್ಟೆಡ್ ವಿಮಾನದಲ್ಲಿ ಭಾರತಕ್ಕೆ ಬಂದಿದ್ದು, ಪೋಖ್ರಾನ್ ರೇಂಜ್ ಗಳಲ್ಲಿ ಪರೀಕ್ಷಾರ್ಥ ಬಳಕೆ ಮಾಡಲಗುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ. ಸುಮಾರು 737 ಶತಕೋಟಿ ಡಾಲರ್ ಮೊತ್ತದ(5,000 ಕೋಟಿ ರೂ) ಒಪ್ಪಂದ ಇದಾಗಿದ್ದು, ವಿದೇಶಿ ಮಿಲಿಟರಿ ಮಾರಾಟದಡಿಯಲ್ಲಿ ಫಿರಂಗಿ ಬಂದೂಕುಗಳನ್ನು ತಯಾರಿಸುವ ಅಮೆರಿಕಾದ ಬಿಎಇ ಸಿಸ್ಟಮ್ಸ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. 
ಮಾರ್ಚ್ 2019 ರ ವೇಳೆ ಹೋವಿಟ್ಜರ್ ಗಳ ಪೂರೈಕೆ ಮತ್ತಷ್ಟು ಚುರುಕುಪಡೆಯಲಿದ್ದು, 2021 ರ ವೇಳೆಗೆ ಎಲ್ಲಾ 145 ಹೋವಿಟ್ಜರ್ ಗಳನ್ನು ಭಾರತೀಯ ಸೇನೆಗೆ ಪೂರೈಕೆ ಮಾಡಲಾಗುತ್ತದೆ. ಈ ಪೈಕಿ ಮೊದಲ 25 ಹೋವಿಟ್ಜರ್ ಗನ್ ಗಳನ್ನು ಆಮದು ಮಾಡಿಕೊಂಡು ನಂತರ 120 ಹೋವಿಟ್ಜರ್ ಗಳನ್ನು ಇಲ್ಲೇ ಅಸೆಂಬಲ್ (ಜೋಡಣಾ ಪ್ರಕ್ರಿಯೆ) ಮಾಡಲಾಗುತ್ತದೆ, ಅಸೆಂಬರ್ ಮಾಡುವುದಕ್ಕಾಗಿ ಮಹೀಂದ್ರಾ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 
24.7ಕೀ.ಮೀ ದೂರದ ವರೆಗೆ ನಿಖರ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಹೋವಿಟ್ಜರ್ ಗಳು  ರಾಕೆಟ್‌ ಲಾಂಚರ್‌ನ ನೆರವಿನೊಂದಿಗೆ ಮತ್ತು ಹಗುರ ಮದ್ದುಗುಂಡುಗಳನ್ನು ಬಳಸಿ 30 ಕಿ.ಮೀ. ದೂರದ ವರೆಗೂ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಎಂ 777ನಲ್ಲಿ ಡಿಜಿಟಲ್‌ ಫೈರ್‌ ಕಂಟ್ರೋಲ್‌ ಸಿಸ್ಟಮ್‌ ಅನ್ನು ಬಳಕೆ ಮಾಡಲಾಗುತ್ತದೆಯಾದ್ದರಿಂದ ತ್ವರಿತಗತಿಯಲ್ಲಿ ಗುಂಡು ಹಾರಿಸಲು ಸಾಧ್ಯವಿದೆ. ಒಂದು ನಿಮಿಷಕ್ಕೆ 5 ಸುತ್ತು ಗುಂಡು ಹಾರಿಸುವ ಸಾಮರ್ಥ್ಯ ಹೊಂದಿರುವ  ಎಂ 777 ಹೊವಿಟ್ಜರ್‌ ಗನ್‌ ನಿರ್ವಹಣೆಗೆ 8 ಮಂದಿ ಸಿಬ್ಬಂದಿ ಅಗತ್ಯವಿದೆ. ಹೊವಿಟ್ಜರ್‌ ಗನ್‌ ಅನ್ನು 2008ರಲ್ಲಿ ಅಮೆರಿಕ ಆಫ್ಘಾನಿಸ್ಥಾನದ ಮೇಲಿನ ಯುದ್ಧದಲ್ಲಿ ಬಳಕೆ ಮಾಡಿಕೊಂಡಿತ್ತು.
1986ರಲ್ಲಿ ಬೋಫೋರ್ಸ್ ಒಪ್ಪಂದದ ನಂತರ ಲಂಚ ಹಗರಣದಲ್ಲಿ ಸಿಲುಕಿದ ಮೇಲೆ ಭಾರತ ಯಾವುದೇ ಫಿರಂಗಿ ಬಂದೂಕುಗಳನ್ನು ಖರೀದಿಸಿರಲಿಲ್ಲ. ಈಗ 1980 ರ ನಂತರ ಮೊದಲ ಬಾರಿಗೆ ಆರ್ಟಿಲರಿ ಗನ್ ಗಳನ್ನು ಭಾರತ ಆಮದು ಮಾಡಿಕೊಂಡಿದೆ. 
SCROLL FOR NEXT