ತಿರುವನಂತಪುರಂ: ಯುವತಿಯೊಬ್ಬಳು ತನ್ನ ಮೇಲೆ ಅತ್ಯಾಚಾರವೆಸಗಲು ಮುಂದಾದ ದುಷ್ಕರ್ಮಿಯ ಮರ್ಮಾಂಗವನ್ನೇ ಕತ್ತರಿಸಿ ಹಾಕಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ.
ಕೇರಳದ ಕೊಲ್ಲಂ ನಲ್ಲಿ ಈ ಘಟನೆ ನಡೆದಿದ್ದು, ಅತ್ಯಾಚಾರಕ್ಕೆ ಮುಂದಾದ ದುಷ್ಕರ್ಮಿಯನ್ನು ಸ್ವಯಂ ಘೋಷಿತ ದೇವಮಾನವ ಸ್ವಾಮಿ ಗಣೇಶಾನಂದ ಅಲಿಯಾಸ್ ಹರಿ ಸ್ವಾಮಿ ಎಂದು ಹೇಳಲಾಗಿದೆ.
54 ವರ್ಷದ ಸ್ವಾಮಿ ಯುವತಿಯ ಕುಟುಂಬಕ್ಕೆ ಸುಮಾರು ವರ್ಷಗಳಿಂದ ಪರಿಚಿತನಾಗಿದ್ದು, ಅವರ ಮನೆಯಲ್ಲಿ ನಡೆಯುವ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುತ್ತಿದ್ದನಂತೆ. ಅಲ್ಲದೆ ಆತ ಕೊಲ್ಲಂನಲ್ಲಿರುವ ಪನ್ಮನ ಆಶ್ರಮದ ಸದಸ್ಯ ಕೂಡ ಆಗಿದ್ದಾನೆ ಎಂದು ತಿಳಿದುಬಂದಿದೆ.
ಯುವತಿ ಆರೋಪಿಸಿರುವಂತೆ ಆಕೆ 16 ವರ್ಷದವಳಾಗಿದ್ದಾಗಿನಿಂದಲೇ ಈ ಕಪಟಿ ಸ್ವಾಮಿ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದನಂತೆ. ಬಳಿಕ ಕ್ರಮೇಣ ಆಕೆಯ ಮನೆಗೆ ಆಗಮಿಸುತ್ತಿದ್ದ ಸ್ವಾಮಿ ಸಮಯ ಸಿಕ್ಕಾಗಲೆಲ್ಲಾ ಆತ್ಯಾಚಾರ ಮಾಡುತ್ತಿದ್ದ. ಈತನ ದೌರ್ಜನ್ಯದಿಂದ ಬೇಸತ್ತು ಇದೀಗ ಆತನ ಮೇಲೆ ಹಲ್ಲೆ ಮಾಡಿರುವುದಾಗಿ ಯುವತಿ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.
ಪ್ರಸ್ತುತ ಆರೋಪಿ ಸ್ವಾಮಿಯನ್ನು ತ್ರಿವೆಂಡ್ರಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆತನ ಮರ್ಮಾಂಗಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಪ್ರಸ್ತುತ ಆತ ಆಪಾಯದಿಂದ ಪಾರಾಗಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇನ್ನು ಆರೋಪಿ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡಿದ್ದು, ಹಲ್ಲೆ ಮಾಡಿದ ಯುವತಿ ವಿರುದ್ಧ ಯಾವುದೇ ದೂರು ದಾಖಲಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics