ನವದೆಹಲಿ: ಕಳೆದ ಮಾರ್ಚ್ 30ರಂದು ಅಸ್ಸಾಂನಲ್ಲಿ ಬೋಡೋ ಉಗ್ರರ ವಿರುದ್ಧ ನಡೆದ ಎನ್ ಕೌಂಟರ್ ನಕಲಿ ಎಂಬ ಸ್ಫೋಟಕ ಮಾಹಿತಿಯನ್ನು ಸಿಆರ್ ಪಿಎಫ್ ಐಜಿಪಿ ರಜನೀಶ್ ರಾಯ್ ಹೇಳಿದ್ದಾರೆ.
ಭದ್ರತಾ ಸಿಬ್ಬಂದಿಗಳೊಂದಿಗಿನ ಗುಂಡಿನ ಕಾಳಗದಲ್ಲಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿರುವ ಇಬ್ಬರು ಬೋಡೊ ಉಗ್ರರನ್ನು ಯೋಧರು ಮತ್ತು ಪೊಲೀಸರು ಮೊದಲೇ ವಶಕ್ಕೆ ತೆಗೆದುಕೊಂಡು, ಬಳಿಕ ಕ್ರೂರವಾಗಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಸಿಆರ್‌ಪಿಎಫ್‌ನ ಮಹಾ ನಿರ್ದೇಶಕ ರಜನೀಶ್ ರಾಯ್ ಅವರು ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ. ಅಸ್ಸಾಂ ಮತ್ತು ಈಶಾನ್ಯ ಭಾರತದ ಇತರ ಭಾಗಗಳಲ್ಲಿ ಬಂಡಾಯ ನಿಗ್ರಹ ಪಡೆಯ ಉಸ್ತುವಾರಿ ಹೊಂದಿರುವ ಈ ‘ಪೂರ್ವಯೋಜಿತ ಕೊಲೆಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಅವರು ಸೂಚಿಸಿದ್ದಾರೆ.
ಮಾ.30ರಂದು ಸಂಜೆ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾಗ ನಾಲ್ಕೈದು ವ್ಯಕ್ತಿಗಳ ಗುಂಪು ಅವರ ಮೇಲೆ ಗುಂಡಿನ ಮಳೆಗರೆದಿತ್ತು. ಪ್ರತಿದಾಳಿ ನಡೆಸಿದಾಗ ಇಬ್ಬರು ಶಂಕಿತ ಬೋಡೊ ಉಗ್ರರು ಸಾವನ್ನಪ್ಪಿದ್ದರು. ಅವರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಆರ್‌ಪಿಎಫ್ ಅಂದು ತನ್ನ ಅಧಿಕೃತ ವರದಿಯಲ್ಲಿ ಹೇಳಿತ್ತು. ಈ ವರದಿಯನ್ನು ಪರಿಶೀಲಿಸಿರುವ ಸಿಆರ್ ಪಿಎಫ್ ಐಜಿಪಿ ರಜನೀಶ್ ರಾಯ್ ಅವರು ಅದರಲ್ಲಿನ ಹೇಳಿಕೆಗಳು ಕೆಲವೆಡೆ ಪರಸ್ಪರ ತಾಳೆಯಾಗುತ್ತಿಲ್ಲ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಆ ಮೂಲಕ ಅಂದಿನ ಎನ್ ಕೌಂಟರ್ ನಕಲಿ ಎಂಬ ವಾದವನ್ನು ಮಂಡಿಸಿದ್ದಾರೆ.
ಅನೇಕ ಸಾಕ್ಷಾಧಾರಗಳನ್ನು ಆಧರಿಸಿ ತನ್ನ ವರದಿಯನ್ನು ಸಿದ್ಧಪಡಿಸಿರುವ ರಾಯ್, ಮೃತರಾಗಿರುವ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಮೊದಲೇ ಇನ್ನೊಂದು ಗ್ರಾಮದಿಂದ ತಮ್ಮ ವಶಕ್ಕೆ ತೆಗೆದುಕೊಂಡಿದ್ದನ್ನು ನೋಡಿರುವ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಭದ್ರತಾ ಸಿಬ್ಬಂದಿಗಳು ಚೀನಿ ನಿರ್ಮಿತ ಗ್ರೆನೇಡೊಂದನ್ನು ಮಾತ್ರ ವಶಪಡಿಕೊಂಡಿದ್ದು, ಇತರ ಶಸ್ತ್ರಾಸ್ತ್ರಗಳನ್ನು ಪೊಲೀಸರೇ ಶವಗಳ ಬಳಿ ಇರಿಸಿದ್ದರು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ತಮ್ಮ ವಶದಲ್ಲಿದ್ದ ಇಬ್ಬರು ವ್ಯಕ್ತಿಗಳ ಪೂರ್ವಯೋಜಿತ ಕೊಲೆಗಳನ್ನು ಮುಚ್ಚಿಡಲು ಮತ್ತು ವೃತ್ತಿಪರ ಸಾಧನೆಯ ಶೌರ್ಯಪೂರ್ಣ ಕರ್ತವ್ಯವನ್ನು ನಿರ್ವಹಿಸಿದ್ದೇವೆ ಎಂದು ಬಿಂಬಿಸಲು ಭದ್ರತಾ ಪಡೆಗಳಿಂದ ಜಂಟಿ ಕಾರ್ಯಾಚರಣೆಯ ಕಟ್ಟುಕತೆಯನ್ನು ಸಿಆರ್‌ಪಿಎಫ್ ನ ವರದಿಯಲ್ಲಿ ಮಂಡಿಸಲಾಗಿತ್ತು ಎಂದು ರಾಯ್ ತಮ್ಮ ವರದಿಯಲ್ಲಿ ಹೇಳಿದ್ದಾರೆ.
ಸುಕ್ಮಾ ದಾಳಿ ಬಳಿಕ ನಕ್ಸಲ್ ನಿಗ್ರಹ ಕಾರ್ಯಾಚರಣೆ ತೀವ್ರ ಗೊಳಿಸಲಾಗಿದ್ದು, ಇದೀಗ ರಜನೀಶ್ ರಾಯ್ ಅವರ ಹೇಳಿಕೆಯಿಂದಾಗಿ ಕಾರ್ಯಾಚರಣೆಯ ಮೇಲೆ ಕಾರ್ಮೋಡ ಕವಿದಂತಾಗಿದೆ.