ನವದೆಹಲಿ; ಸುಕ್ಮಾ ನಕ್ಸಲರ ಭೀಕರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಕತ್ವ ವೈಫಲ್ಯ ಹಿನ್ನಲೆಯಲ್ಲಿ ಸಹಾಯಕ ಕಮಾಂಡೆಂಟ್ ಜಯಾನ್ ವಿಶ್ವನಾಥ್ ಅವರನ್ನು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಆರ್'ಪಿಎಫ್) ಬುಧವಾರ ಅಮಾನತು ಮಾಡಿದೆ.
ರಸ್ತೆ ಕಾಮಗಾರಿ ನಡೆಸುತ್ತಿದ್ದ ಜನರಿಗೆ ಸಿಆರ್ ಪಿಎಫ್ ಪಡೆ ಭದ್ರತೆ ನೀಡುತ್ತಿತ್ತು. ಈ ವೇಳೆ ಭದ್ರತಾ ಪಡೆಯ ನಾಯಕತ್ವವನ್ನು ಜಯಾನ್ ವಿಶ್ವನಾಥ್ ಅವರು ವಹಿಸಿದ್ದರು. ದಾಳಿ ವೇಳೆ ಸಮರ್ಪಕವಾಗಿ ನಾಯಕತ್ವವನ್ನು ನಿಭಾಯಿಸದ ಕಾರಣ ಇದೀಗ ವಿಶ್ವನಾಥ್ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, 74ನೇ ಬೆಟಾಲಿಯನ್ ಕಮಾಂಡಿಂಗ್ ಅಧಿಕಾರಿ ಕಮಾಂಡೆಂಟ್ ಫಿರೋಜ್ ಕುಜರ್ ಅವರನ್ನು ಸಹ ಸಶಸ್ತ್ರ ಪಡೆಯಿಂದ ಎತ್ತಂಗಡಿ ಮಾಡಲಾಗಿದೆ.
ಸುಕ್ಮಾ ದಾಳಿ ಪ್ರಕರಣ ಸಂಬಂಧ ವಿಶ್ವನಾಥ್ ಅವರ ಮೇಲಿನ ಇಲಾಖಾ ವಿಚಾರಣೆ ಈ ವರೆಗೂ ಪೂರ್ಣಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಕಳೆದ ಏಪ್ರಿಲ್ 24 ರಂದು ಛತ್ತೀಸ್ಗಢದ ಸುಕ್ಮಾದ ರಸ್ತೆಯೊಂದರಲ್ಲಿ ಕಾರ್ಮಿಕರು ಕಾಮಗಾರಿ ಕೆಲಸವನ್ನು ಮಾಡುತ್ತಿದ್ದರು. ಕಾಮಗಾರಿ ನಡೆಸುತ್ತಿದ್ದ ಜನರಿಗೆ 150ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಭದ್ರತೆಯನ್ನು ಒದಗಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ 300ಕ್ಕೂ ಹೆಚ್ಚು ನಕ್ಸಲರು ಏಕಾಏಕಿ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ 25 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.