ಗ್ರೇಟರ್ ನೊಯ್ಡಾ: ಉತ್ತರಪ್ರದೇಶದಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮರೆದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದರನ್ನು ಅಡ್ಡಗಟ್ಟಿದ ಕಿರಾತಕರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ವ್ಯಕ್ತಿಯೊಬ್ಬನಿಗೆ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ನಾಲ್ವರು ಪುರುಷರು ಹಾಗೂ ನಾಲ್ವರು ಮಹಿಳೆಯರಿದ್ದ ಕುಟುಂಬವೊಂದು ಕಾರಿನಲ್ಲಿ ಕಳೆದ ರಾತ್ರಿ ಜೆವಾರ್-ಬುಲಂದ್'ಶಹರ್ ಹೆದ್ದಾರಿಯಲ್ಲಿ ತೆರಳುತ್ತಿತ್ತು. ಈ ವೇಳೆ ರಸ್ತೆಗೆ ಮಧ್ಯೆ ಬಂದಿರುವ ದುಷ್ಕರ್ಮಿಗಳ ತಂಡ ಕಾರನ್ನು ತಡೆದಿದೆ.
ಕೈಯಲ್ಲಿ ಗನ್ ಹಿಡಿದು ಬೆದರಿಸಿರುವ ದುಷ್ಕರ್ಮಿಗಳು ನಾಲ್ವರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ತಡೆಯಲು ಮುಂದಾದ ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆಗೈದಿದ್ದಾರೆ. ವ್ಯಕ್ತಿ ಸಾವನ್ನಪ್ಪುತ್ತಿದ್ದಂತೆಯೇ ಹಣ ಹಾಗೂ ಚಿನ್ನಾಭರಣಗಳನ್ನು ದೋಚಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಪ್ರಸ್ತುತ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತಂಡಗಳನ್ನು ರಚಿಸಿ ದುಷ್ಕರ್ಮಿಗಳಿಗಾಗಿ ವ್ಯಾಪಕ ಕಾರ್ಯಾಚಱಣೆ ನಡೆಸುತ್ತಿದ್ದಾರೆ. ಸಂತ್ರಸ್ಥ ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಕಳೆದ ವರ್ಷ ಕೂಡ ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ದೆಹಲಿ-ಕಾನ್ಪುರ ಹೆದ್ದಾರಿ ಬಳಿ ಇದೇ ರೀತಿಯಲ್ಲಿ ಕಾರು ಅಡ್ಡಗಟ್ಟಿ ತಾಯಿ ಹಾಗೂ ಮಗಳ ಮೇಲೆ ದುಷ್ಕರ್ಮಿಗಳ ತಂಡ ಸಾಮೂಹಿಕ ಅತ್ಯಾಚಾರ ನಡೆಸಿತ್ತು. ಈ ಪ್ರಕರಣ ಇಡೀ ದೇಶ ಬೆಚ್ಚಿ ಬೀಳುವಂತೆ ಮಾಡಿತ್ತು.