ಶ್ರೀನಗರ: ಕಳೆದ 24 ಗಂಟೆಗಳಲ್ಲಿ 10 ಉಗ್ರರನ್ನು ಹತ್ಯೆ ಮಾಡುವ ಮೂಲಕ ಕಾಶ್ಮೀರದಲ್ಲಿ ಭಯೋತ್ಪಾದನೆ ಹರಡುವ ಪಾಕಿಸ್ತಾನದ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಶನಿವಾರ ಭಾರತೀಯ ಸೇನೆ ತಿಳಿಸಿದೆ.
ಭದ್ರತಾ ಪಡೆಗಳು ಪಟ್ಟು ಬಿಡದೆ ಶುಕ್ರವಾರದಿಂದ ನಿರಂತರ ಕಾರ್ಯಾಚರಣೆ ನಡೆಸಿ 10 ಉಗ್ರರನ್ನು ಹತ್ಯೆ ಮಾಡಿದೆ. ಈ ಮೂಲಕ ಪವಿತ್ರ ರಂಝಾನ್ ತಿಂಗಳಲ್ಲಿ ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ಹರಡಲು ಪಾಕಿಸ್ತಾನ ಹಾಗೂ ಪಾಕ್ ಪ್ರಯೋಜಿತ ಏಜೆಂಟರ್ ಯತ್ನಗಳನ್ನು ವಿಫಲಗೊಳಿಸಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ನುಸುಳುಕೋರರ ವಿರುದ್ಧದ ಕಾರ್ಯಾಚರಣೆಯಲ್ಲಿ ರಾಂಪುರ್ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆ ಬಳಿ ಆರು ಉಗ್ರರು ಸೇರಿದಂತೆ ಭಾರಿ ಶಸ್ತ್ರಾಸ್ತ್ರ ಹೊಂದಿದ್ದ 10 ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಎಂದು ಅವರು ಹೇಳಿದ್ದಾರೆ.
ಇಂದು ಬೆಳಗ್ಗೆ ಪುಲ್ವಾಮಾ ಜಿಲ್ಲೆಯ ಟ್ರಾಲ್ ನ ಸೊಮಹ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಸಬ್ಜಾರ್ ಭಟ್ ನನ್ನು ಹೊಡೆದುರುಳಿಸಲಾಗಿತ್ತು. ಇದೇ ಎನ್ ಕೌಂಟರ್ ನಲ್ಲಿ ಮತ್ತಿಬ್ಬರು ಉಗ್ರರು ಕೂಡ ಹತರಾಗಿದ್ದರು.
ನಿನ್ನೆ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆ(ಎಲ್ ಒಸಿ) ಬಳಿ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಮ್(ಬಿಎಟಿ)ನ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿತ್ತು.