ನವದೆಹಲಿ: ಅನುಮತಿ ಇಲ್ಲದಿದ್ದರೂ ಹಿಂಸಾಚಾರ ಪೀಡಿತ ಉತ್ತರ ಪ್ರದೇಶದ ಸಹರನಾಪುರಕ್ಕೆ ಭೇಟಿ ನೀಡಲು ತೆರಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಜಿಲ್ಲಾ ಗಡಿಯಲ್ಲೇ ತಡೆಯಲ್ಲೇ ತಡೆಯಲಾಗಿದೆ.
ಸಹರನಾಪುರದಲ್ಲಿ ಇತ್ತೀಚಿಗಷ್ಟೇ ಜಾತಿ ಸಂಘರ್ಷಕ್ಕೆ ಇಬ್ಬರು ಬಲಿಯಾಗಿ ಹಲವರು ಗಾಯಗೊಂಡಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂಸಾಚಾರ ಪೀಡಿತ ಸಹರನಾಪುರಕ್ಕೆ ಭೇಟಿ ನೀಡುವುದಕ್ಕೆ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿರಲಿಲ್ಲ. ಇದರ ಹೊರತಾಗಿಯೂ ರಾಹುಲ್ ಗಾಂಧಿ ಇಂದು ಸಹರನಾಪುರಕ್ಕೆ ಭೇಟಿ ನೀಡಲು ಯತ್ನಿಸಿದರು. ಆದರೆ ಅವರನ್ನು ಜಿಲ್ಲಾ ಗಡಿಯಲ್ಲೇ ಉತ್ತರ ಪ್ರದೇಶ ಪೊಲೀಸರು ತಡೆದಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ನಾನು ಸಹರನಾಪುರಕ್ಕೆ ಭೇಟಿ ನೀಡಲು ಬಯಸಿದ್ದೆ. ಆದರೆ ನನ್ನನ್ನು ತಡೆಯಲಾಗಿದೆ. ಜಿಲ್ಲಾಡಳಿತದ ಮನವಿ ಹಿನ್ನೆಲೆಲ್ಲಿ ನಾನು ವಾಪಸ್ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಇಂದು ದೇಶದಲ್ಲಿ ಬಲಹೀನರಿಗೆ ಸಮಾಜದಲ್ಲಿ ಬದುಕಲು ಅವಕಾಶವೇ ಇಲ್ಲದಂತಾಗಿದೆ. ಎಲ್ಲರಿಗೂ ರಕ್ಷಣೆ ಒದಗಿಸುವುದು ಸರ್ಕಾರದ ಕರ್ತವ್ಯ. ಆದರೆ ಎನ್ ಡಿಎ ಸರ್ಕಾರ ದೇಶಾದ್ಯಂತ ಬಲಹೀನರದಲ್ಲಿ ಭಯ ಹುಟ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಹಿಂಸಾಗ್ರಸ್ತ ಸಹರಣಪುರಕ್ಕೆ ಯಾವುದೇ ರಾಜಕಾರಣಿಯ ಭೇಟಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅನುಮತಿ ನಿರಾಕರಿಸಿ ಆದೇಶ ಹೊರಡಿಸಿದ್ದಾರೆ. ಅಂತೆಯೇ ರಾಹುಲ್ ಗಾಂಧಿಯ ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ಅನುಮತಿ ನಿರಾಕರಿಸಲಾಗಿದೆ. ಹಾಗಾಗಿ ರಾಹುಲ್ ಗಾಂಧಿ ರಸ್ತೆ ಮೂಲಕ ಪ್ರಯಾಣಿಸಿ ಸಹರನಾಪುರಕ್ಕೆ ಹೋಗಲು ಯತ್ನಿಸಿದ್ದರು.