ದೇಶ

ಸಿಬಿಎಸ್ಇ ಟಾಪರ್ಸ್ ಆರ್ಥಿಕ ತಜ್ಞ, ರಾಜಕೀಯ, ಐಎಎಸ್ ಆಫೀಸರ್ ಆಗಲು ಬಯಸಿದ್ದಾರೆ: ಪ್ರಕಾಶ್ ಜಾವದೇಕರ್

Sumana Upadhyaya
ನವದೆಹಲಿ: ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಭಾನುವಾರ ಪ್ರಕಟಗೊಳ್ಳುತ್ತಿದ್ದಂತೆ ಕಲೆ, ವಾಣಿಜ್ಯ, ವಿಜ್ಞಾನ ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವದೇಕರ್ ಅಭಿನಂದನೆ ಸಲ್ಲಿಸಿದ್ದಾರೆ.
ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ. ಆ ವಿದ್ಯಾರ್ಥಿಗಳ ಕಠಿಣ ಶ್ರಮ, ಶ್ರದ್ಧೆ, ಸಾಧನೆ, ಗುರಿ ಅವರನ್ನು ಈ ಹಂತಕ್ಕೆ ತಂದಿದೆ. ಇದರಿಂದ ಅವರ ವೈಯಕ್ತಿಕ ಜೀವನ ಮತ್ತು ದೇಶಕ್ಕೆ ಲಾಭವಿದೆ ಎಂದು ಸುದ್ದಿ ಸಂಸ್ಥೆಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಾರಿಯ ಪರೀಕ್ಷೆಯಲ್ಲಿ ಚೆನ್ನಾಗಿ ಅಂಕ ಗಳಿಸದವರು ಮುಂದಿನ ಸಲ ಕಠಿಣ ಶ್ರಮ ಹಾಕಿ ಉತ್ತಮ ಅಂಕ ಗಳಿಸಲು ನೋಡಬೇಕು. ತಮ್ಮಿಂದ ಸಾಧ್ಯವಾಗುವುದಿಲ್ಲ ಎಂದು ಮಧ್ಯದಲ್ಲಿ ಕೈ ಚೆಲ್ಲಬಾರದು ಎಂದರು.
ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಜತೆ ಸಚಿವರು ಖುದ್ದಾಗಿ ಮಾತನಾಡಿದ್ದಾರೆ. ಇವರೆಲ್ಲರ ಆಕಾಂಕ್ಷೆಗಳು ಉನ್ನತವಾಗಿದ್ದು, ಇಂತಹ ಶ್ರಮಶೀಲ ವ್ಯಕ್ತಿಗಳು ದೇಶದ ಭವಿಷ್ಯಕ್ಕೆ ನಿರ್ಣಾಯಕರಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ನಾನು ಇವತ್ತು ರಕ್ಷಾ ಗೋಪಾಲ್, ಭೂಮಿ ಸಾವಂತ್, ಮನ್ನತ್ ಲುತ್ರಾ ಮತ್ತು ಆದಿತ್ಯ ಜೈನ್ ಜೊತೆ ಮಾತನಾಡಿದ್ದೇನೆ. ಅವರು ಆರ್ಥಿಕ ತಜ್ಞರಾಗುವ, ರಾಜಕೀಯದಲ್ಲಿ ಮುಂದುವರಿಯುವ, ಐಎಎಸ್ ಆಫೀಸರ್ ಮತ್ತು ಎಂಜಿನಿಯರ್ ಆಗುವ ಕನಸು ಹೊತ್ತಿದ್ದಾರೆ. ಈ ವಯಸ್ಸಿನಲ್ಲಿ ಅಂತಹ ಕನಸು ಕಾಣುವವರು ನಮ್ಮ ದೇಶಕ್ಕೆ ಬೇಕಾಗಿದೆ. ದೇಶದ ಬೆಳವಣಿಗೆಗೆ ಉತ್ತಮ ಎಂದು ಜಾವದೇಕರ್ ಹೇಳಿದರು.
ಕಲಾ ವಿಭಾಗದ ರಕ್ಷಾ ಗೋಪಾಲ್ ಶೇಕಡಾ 99.6, ಭೂಮಿ ಸಾವಂತ್ ಶೇಕಡಾ 99.2, ಮನ್ನತ್ ಲುತ್ರಾ ಶೇಕಡಾ 99.2 ಮತ್ತು ಅಂಕ ಗಳಿಸಿದ್ದಾರೆ.  ಈ ವರ್ಷ ಸರಾಸರಿ ಶೇಕಡಾ 82 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಸುಮಾರು 11 ಲಕ್ಷ ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆ ಬರೆದಿದ್ದರು.
ಟಾಪರ್ ಆಗಬೇಕೆಂಬುದು ತಮ್ಮ ಉದ್ದೇಶವಾಗಿರಲಿಲ್ಲ. ಉತ್ತಮ ಅಂಕ ಗಳಿಸುವುದಾಗಿತ್ತು ಎಂದು ಅತಿ ಹೆಚ್ಚು ಅಂಕ ಗಳಿಸಿದ ಅಮಿತಿ ಇಂಟರ್ ನ್ಯಾಷನಲ್ ಶಾಲೆಯ ರಕ್ಷಾ ಗೋಪಾಲ್ ಹೇಳಿದ್ದಾರೆ.
ಎಲ್ಲಾ ವಿಷಯಗಳಿಗೂ ಪ್ರಾಮುಖ್ಯತೆ ನೀಡುತ್ತಿದ್ದೆ. ಸಾಧ್ಯವಾದಷ್ಟು ವಿಷಯಗಳನ್ನು ಸಂಗ್ರಹಿಸುತ್ತಿದ್ದೆ. ನನ್ನ ಶಾಲೆಯ ಅಧ್ಯಾಪಕರು ಕೂಡ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
SCROLL FOR NEXT