ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಸರಣಿ ಭ್ರಷ್ಟಾಚಾರ ಆರೋಪ ಮಾಡಿದ್ದ ಆಮ್ ಆದ್ಮಿ ಪಕ್ಷದ ಬಂಡಾಯ ಶಾಸಕ ಹಾಗೂ ಮಾಜಿ ಸಚಿವ ಕಪಿಲ್ ಮಿಶ್ರಾ ಮೇಲೆ ಆಪ್ ಶಾಸಕರು ಹಲ್ಲೆ ನಡೆಸಿದ ಘಟನೆ ಬುಧವಾರ ದೆಹಲಿ ವಿಧಾನಸಭೆಯಲ್ಲಿ ನಡೆದಿದೆ.
ಜಿಎಸ್ ಟಿ ಮಸೂದೆ ಕುರಿತು ಚರ್ಚಿಸಲು ಇಂದು ವಿಶೇಷ ಅಧಿವೇಶನ ಕರೆಯಲಾಗಿದ್ದು, ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಘೋಷಣೆ ಕೂಗಲು ಯತ್ನಿಸಿದ ಕಪಿಲ್ ಮಿಶ್ರಾ ಮೇಲೆ ಆಪ್ ಶಾಸಕರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಪ್ರತಿಪಕ್ಷ ಸದಸ್ಯರು ಮಿಶ್ರಾ ರಕ್ಷಣೆಗೆ ಧಾವಿಸಿದ್ದಾರೆ.
ವಿಧಾನಸಭೆಯಲ್ಲಿ ಆಡಳಿತ, ಪ್ರತಿಪಕ್ಷಗಳ ಹಾಗೂ ಭಿನ್ನಮತಿಯ ಶಾಸಕರ ನಡುವೆ ಭಾರಿ ಹೈಡ್ರಾಮಾ ನಡೆದ ನಂತರ ಕಪಿಲ್ ಮಿಶ್ರಾ ಅವರನ್ನು ಮಾರ್ಷೆಲ್ ಗಳ ಮೂಲಕ ಸದನದಿಂದ ಹೊರ ಹಾಕಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಪಿಲ್ ಮಿಶ್ರಾ, ಆಮ್ ಆದ್ಮಿ ಪಕ್ಷದ ನಾಲ್ಕೈದು ಶಾಸಕರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಮುಖಕ್ಕೆ ಪಂಚ್ ಕೊಟ್ಟಿದ್ದಲ್ಲದೆ ನನಗೆ ಕಾಲಿನಿಂದ ಒದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಆಪ್ ಶಾಸಕರು ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದರೆ, ಅರವಿಂದ್ ಕೇಜ್ರಿವಾಲ್ ಅವರು ಅದನ್ನು ನೋಡಿ ನಗುತ್ತಿದ್ದರು... ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಸೂಚನೆ ಮೆರೆಗೆ ಶಾಸಕರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ನಾನು ಇದಕ್ಕೆಲ್ಲಾ ಹೆದರುವುದಿಲ್ಲ. ನನ್ನ ಮೇಲೆ ಎಷ್ಟೇ ದಾಳಿ ನಡೆಸಿದರು ನಾನು ನಿಮ್ಮನ್ನು ಬಿಡಲ್ಲ. ನಿಮ್ಮ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಡಿಸಿಡುತ್ತೇನೆ ಎಂದು ಉಚ್ಚಾಟಿತ ಆಪ್ ನಾಯಕ ಕಪಿಲ್ ಮಿಶ್ರಾ ಗುಡುಗಿದ್ದಾರೆ.
ಸದನದಲ್ಲಿ ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ಹೀಗಾಗಿ ನಾನು ಭ್ರಷ್ಟಾಚಾರಗಳ ಬಗ್ಗೆ ಚರ್ಚಿಸಲು ರಾಮಲಿಲಾ ಮೈದಾನದಲ್ಲಿ ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸಿದೆ. ಇದರಿಂದ ಆಕ್ರೋಶಗೊಂಡ ಆಪ್ ಶಾಸಕರು ನನ್ನ ಮೇಲೆ ದಾಳಿ ನಡೆಸಿದ್ದಾರೆ ಎಂದು ಕಪಿಲ್ ಮಿಶ್ರಾ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics