ಹಿಮಾಚಲ ಪ್ರದೇಶ: ಸಬ್ಸಿಡಿಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದು, ನಮ್ಮ ಸರ್ಕಾರ ಸಬ್ಸಿಡಿ ಸೋರಿಕೆಯನ್ನು ತಡೆಗಟ್ಟಿದ್ದನ್ನು ಕಾಂಗ್ರೆಸ್ ಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸಬ್ಸಿಡಿ ಹೆಸರಿನಲ್ಲಿ ಈ ಹಿಂದೆ ಕೊಳ್ಳೆಹೊಡೆಯಲಾಗುತ್ತಿತ್ತು. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ 57,000 ಕೋಟಿ ರೂಪಾಯಿ ನಷ್ಟ ಉಂಟಾಗುತ್ತಿತ್ತು. ಆದರೆ ನಮ್ಮ ಸರ್ಕಾರ ಬಂದ ನಂತರ 57,000 ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡಿದೆ. ಇದನ್ನು ಕಾಂಗ್ರೆಸ್ ನವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಮೋದಿ ಹಿಮಾಚಲ ಪ್ರದೇಶ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.
ಕೇಂದ್ರದಿಂದ 1 ರೂಪಾಯಿ ಅನುದಾನ ನೀಡಿದರೆ ಗ್ರಾಮಗಳಿಗೆ ತಲುಪುವ ವೇಳೆಗೆ ಅದು 15 ಪೈಸೆಯಾಗಿರುತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದರು. ಭ್ರಷ್ಟಾಚಾರದ ಸಮಸ್ಯೆಯ ಮೂಲವನ್ನು ಕಂಡುಹಿಡಿದಿದ್ದ ರಾಜೀವ್ ಗಾಂಧಿ ಅದನ್ನು ಬಗೆಹರಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಆದರೆ ನಮ್ಮ ಸರ್ಕಾರ ಒಂದು ರೂಪಾಯಿ ನೀಡಿದರೆ ಒಂದೇ ರೂಪಾಯಿ ಗ್ರಾಮಗಳಿಗೆ ತಲುಪುವಂತೆ ಮಾಡಿದೆ ಎಂದು ಮೋದಿ ಹೇಳಿದ್ದಾರೆ.