ದೇಶ

ಜಯಾ ಟಿವಿ ಸೇರಿದಂತೆ ಶಶಿಕಲಾ ಕುಟುಂಬದ ವ್ಯವಹಾರ ಕಚೇರಿಗಳ ಮೇಲೆ ಐಟಿ ದಾಳಿ!

Srinivasamurthy VN
ಚೆನ್ನೈ: ತಮಿಳುನಾಡಿನ ಖ್ಯಾತ ಜಯಾ ಸುದ್ದಿವಾಹಿನಿ ಕಚೇರಿ ಮತ್ತು ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರ ಕುಟುಂಬದ ಮಾಲೀಕತ್ವ ಇರುವ ವ್ಯವಹಾರಗಳ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ  ದಾಳಿ ನಡೆಸಿದ್ದಾರೆ.
ತೆರಿಗೆ ವಂಚನೆ ಸಂಬಂಧ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಜಯಾ ಟಿವಿ, ಜ್ಯಾಜ್ ಸಿನಿಮಾ ಮತ್ತು ಶಶಿಕಲಾ ಅವರ ಕುಟುಂಬದ ಮಾಲೀಕತ್ವ ಇರುವ ವ್ಯವಹಾರಗಳ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ  ನಡೆಸಿದ್ದಾರೆ ಎಂದು ತಿಳಿದುಬಂದಿದೆ. 
ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಹೆಸರಿನಲ್ಲಿ ಆರಂಭವಾದ ಜಯಾ ಟಿವಿಯನ್ನು ಶಶಿಕಲಾ ಅವರ ಸಹೋದರ ಸಂಬಂಧಿ ವಿವೇಕ್ ಜಯರಾಮನ್ ಅವರು ಮುನ್ನಡೆಸುತ್ತಿದ್ದು, ದಶಕಗಳ ಕಾಲ ಜಯಾ ಟಿವಿ  ಎಐಎಡಿಎಂಕೆ ಪಕ್ಷದ ಮುಖವಾಣಿಯಾಗಿತ್ತು. ಎಐಎಡಿಎಂಕೆಯಲ್ಲಿನ ಬಣ ರಾಜಕೀಯದ ಬಳಿಕ ಪನ್ನೀರ್ ಸೆಲ್ವಂ ಬಣದಿಂದ ಜಯಾ ಟಿವಿ ಅಂತರ ಕಾಯ್ದುಕೊಂಡಿತ್ತು. ಇದೀಗ ಪನ್ನೀರ್ ಸೆಲ್ವಂ ಬಣ ಸಿಎಂ ಪಳನಿಸಾಮಿ  ಬಣದೊಂದಿಗೆ ವಿಲೀನವಾಗಿದ್ದು, ಅಲ್ಲದೆ ಜಯಾ ಟಿವಿ ಮತ್ತು ನಮದು ಎಂಜಿಆರ್ ಪತ್ರಿಕೆಗಳನ್ನು ಮತ್ತೆ ಪಕ್ಷದ ಹಿಡಿತಕ್ಕೆ ವಾಪಸ್ ಪಡೆಯಲು ಮುಂದಾಗಿದೆ. ಇದೇ ಕಾರಣಕ್ಕೆ ಪ್ರಸ್ತುತ ಜಯಾ ಟಿವಿ ಮತ್ತು ನಮದು ಎಂಜಿಆರ್  ಪತ್ರಿಕೆಗಳಲ್ಲಿರುವ ಶಶಿಕಲಾ ಅವರ ಆಪ್ತರನ್ನು ದೂರವಿಡಲು ಸಂಘಟಿತ ಎಐಎಡಿಎಂಕೆ ಪಕ್ಷ ಒಕ್ಕೋರಲಿನ ನಿರ್ಧಾರ ಕೈಗೊಂಡಿದೆ.
ಆದರೆ ತಮಿಳುನಾಡಿನಲ್ಲಿ ಉಂಟಾದ ತುರ್ತು ರಾಜಕೀಯ ಬೆಳವಣಿಗೆಗಳಿಂದಾಗಿ ಜಯಾ ಟಿವಿ ತಾನು ಎಐಎಡಿಎಂಕೆ ಪಕ್ಷದಿಂದ ದೂರವಿದ್ದು, ಸ್ವತಂತ್ರ್ಯ ಸುದ್ದಿವಾಹಿನಿಯಾಗಿ ಕಾರ್ಯಾಚರಣೆ ನಡೆಸುವುದಾಗಿ ಘೋಷಣೆ ಮಾಡಿತ್ತು.  ಈ ಬೆಳವಣಿಗೆ ಬೆನ್ನಲ್ಲೇ ಜಯಾ ಟಿವಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
SCROLL FOR NEXT