ಡೊನಾಲ್ಡ್ ಟ್ರಂಪ್-ನರೇಂದ್ರ ಮೋದಿ
ಡ್ಯಾನಂಗ್: ಚೀನಾ ಪ್ರವಾಸ ಮುಕ್ತಾಯಗೊಳಿಸಿ ವಿಯೆಟ್ನಾಂ ನಲ್ಲಿ ನಡೆದ ಎಪಿಇಸಿ ಸಿಇಒ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತವನ್ನು ಹಾಡಿ ಹೊಗಳಿದ್ದಾರೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತ ಹಾಗೂ ನರೇಂದ್ರ ಮೋದಿ ಕೊಡುಗೆಗೆ ಡೊನಾಲ್ಡ್ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೋದಿ ಭಾರತೀಯರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ. ಭಾರತ 70 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಒಂದು ಬಿಲಿಯನ್ ಗಿಂತಲೂ ಹೆಚ್ಚು ಜನಸಂಖ್ಯೆ ಇರುವ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಭಾರತೀಯರನ್ನು ಒಗ್ಗೂಡಿಸಿ ಯಶಸ್ವಿಯಾಗಿ ಮುನ್ನಡೆಸುವತ್ತ ಕೆಲಸ ಮಾಡುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಇದೇ ವೇಳೆ ಇಂಡೋ ಪೆಸಿಫಿಕ್ ಪ್ರದೇಶದ ಯಾವುದೇ ರಾಷ್ಟ್ರದೊಂದಿಗೂ ಪರಸ್ಪರ ಗೌರವ ಹಾಗೂ ಲಾಭದ ಆಧಾರದಲ್ಲಿ ದ್ವಿಪಕ್ಷೀಯ ಒಪ್ಪಂದಕ್ಕೆ ಸಿದ್ಧವಿರುವುದಾಗಿ ಟ್ರಂಪ್ ಘೋಷಿಸಿದ್ದಾರೆ.