ನವದೆಹಲಿ: ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆದಿದ್ದ 2 ನೇ ತರಗಾತಿ ವಿದ್ಯಾರ್ಥಿ ಪ್ರದ್ಯುಮನ್ ಹತ್ಯೆ ಪ್ರಕರಣದಲ್ಲಿ ಈ ಹಿಂದೆ ಬಂಧನಕ್ಕೀಡಾಗಿದ್ದ ಬಸ್ ಕಂಡಕ್ಟರ್ ಕುಟುಂಬ ಎಸ್ಐಟಿ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದೆ.
ಬಸ್ ಕಂಡಕ್ಟರ್ ಅಶೋಕ್ ಕುಮಾರ್ ವಿರುದ್ಧ ಹತ್ಯೆ ಪ್ರಕರಣದಲ್ಲಿ ಬಲವಾದ ಸಾಕ್ಷ್ಯಾಧಾರಗಳು ಇರಲಿಲ್ಲ ಎಂದು ಸಿಬಿಐ ಇತ್ತೀಚೆಗಷ್ಟೇ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಅಶೋಕ್ ಕುಮಾರ್ ನಿರ್ದೋಷಿ ಎಂಬುದು ಬಹುತೇಕ ಸಾಬೀತಾಗಿದ್ದು, ಗುರುಗ್ರಾಮ ವಿಶೇಷ ತನಿಖಾ ದಳದ ವಿರುದ್ಧ ಮೊಕದ್ದಮೆ ದಾಖಲಿಸಲು ತೀರ್ಮಾನಿಸಿದ್ದೇವೆ ಎಂದು ಕಂಡಕ್ಟರ್ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಕಂಡಕ್ಟರ್ ನ್ನು ಬಂಧಿಸಿದ್ದ ವಿಶೇಷ ತನಿಖಾ ದಳದ ಸಿಬ್ಬಂದಿಗಳು ಅಪರಾಧವನ್ನು ಒಪ್ಪಿಕೊಳ್ಳುವಂತೆ ಆತನಿಗೆ ಚಿತ್ರ ಹಿಂಸೆ ನೀಡಿದ್ದರು ಎಂದು ಅಶೋಕ್ ಕುಮಾರ್ ಅವರ ತಂದೆ ಅಮೀರ್ ಚಂದ್ ಆರೋಪಿಸಿದ್ದು ಎಸ್ಐಟಿ ವಿರುದ್ಧ ಪ್ರಕರಣ ದಾಖಲಿಸಲು ಗ್ರಾಮಸ್ಥರಿಂದ ಹಣಕಾಸಿನ ನೆರವು ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.