ದೇಶ

ಶೀಘ್ರ ಎಟಿಎಂ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಗೆ ಭಾರತದಿಂದ ಗೇಟ್ ಪಾಸ್?

Srinivasamurthy VN
ನವದೆಹಲಿ: ನೋಟು ನಿಷೇಧ ಬಳಿಕ ಹಲವು ಮಹತ್ವದ ಆರ್ಥಿಕ ಬೆಳವಣಿಗೆಗೆ ಸಾಕ್ಷಿಯಾಗಿದ್ದ ಭಾರತ ಶೀಘ್ರದಲ್ಲೇ ಎಟಿಎಂ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಕೆಗೆ ಗುಡ್ ಬೈ ಹೇಳಲಿದೆಯಂತೆ..
ಈ ಬಗ್ಗೆ ಸ್ವತಃ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಹೇಳಿದ್ದು, ಇನ್ನು ನಾಲ್ಕು ವರ್ಷಗಳಲ್ಲಿ ದೇಶದಲ್ಲಿನ ಎಲ್ಲ ಎಟಿಎಂ ಕೇಂದ್ರಗಳು ಹಾಗೂ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಗಳು ನೇಪತ್ಯಕ್ಕೆ ಸರಿಯಲಿವೆ ಎಂದು  ಹೇಳಿದ್ದಾರೆ. ನೋಯ್ಡಾದ ಅಮಿಟಿ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಬಳಿಕ ಭಾಷಣ ಮಾಡಿದ ಅಮಿತಾಭ್ ಕಾಂತ್, "ನೋಟು ನಿಷೇಧ ಬಳಿಕ ಭಾರತದಲ್ಲಿ ಡಿಜಿಟಲ್ ವಹಿವಾಟಿಗೆ ಪ್ರಾಮುಖ್ಯತೆ  ಸಿಗುತ್ತಿದೆ. ಜನರು ಕ್ಯಾಶ್'ಲೆಸ್ ವಹಿವಾಟಿಗೆ ಹೊಂದಿಕೊಳ್ಳ ತೊಡಗಿದ್ದಾರೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್'ಗಳ ಬಳಕೆ ಹೆಚ್ಚಾಗುತ್ತಿದೆ. ಆದರೆ, ಈ ನಡುವೆ ಮೊಬೈಲ್ ಫೋನ್'ಗಳೇ ಈಗ ಹಣ ವಹಿವಾಟಿನ ಕೇಂದ್ರವಾಗುತ್ತಿವೆ.  ಹೀಗಾಗಿ ಮುಂದಿನ ದಿನಗಳಲ್ಲಿ ಎಟಿಎಂ ಕೇಂದ್ರ, ಡೆಬಿಟ್ ಮತ್ತು ಕ್ರೆಡಿಟ ಕಾರ್ಡ್ ಗಳೂ ಕೂಡ ನೇಪಥ್ಯಕ್ಕೆ ಸರಿಯಲಿದ್ದು, ಜನರು ಮೊಬೈಲ್ ಫೋನ್ ಮೂಲಕವೇ ಎಲ್ಲಾ ವಹಿವಾಟು ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
"ಭಾರತದಲ್ಲಿರುವ ಯುವ ಸಮುದಾಯದಿಂದ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಪುಷ್ಟಿ ಸಿಗುತ್ತದೆ. ಭಾರತವು ನೂರು ಕೋಟಿ ಬಯೋಮೆಟ್ರಿಕ್ಸ್ ಇರುವ, ನೂರು ಕೋಟಿ ಮೊಬೈಲ್ ಫೋನ್'ಗಳಿರುವ ಮತ್ತು ನೂರು ಕೋಟಿ ಬ್ಯಾಂಕ್  ಅಕೌಂಟ್ ಇರುವ ವಿಶ್ವದ ಏಕೈಕ ರಾಷ್ಟ್ರವಾಗಿದೆ. ಭಾರತದಲ್ಲಿರುವ ಶೇ.72 ಜನರು 32 ವರ್ಷದೊಳಗಿನ ವಯಸ್ಸಿನವರಾಗಿದ್ದಾರೆ. 2040ರವರೆಗೂ ಯುವಸಮುದಾಯವೇ ಭಾರತದಲ್ಲಿ ತುಂಬಿ ತುಳುಕುತ್ತಿರುತ್ತದೆ. ಅಮೆರಿಕ,  ಯೂರೋಪ್ ಮೊದಲಾದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ಭಾಗ್ಯ ಇಲ್ಲ. ನಿರಂತರವಾಗಿ ಹೊಸ ಅನ್ವೇಷಣೆ ಮಾಡುವ, ನಿರಂತರವಾಗಿ ಚಲನಶೀಲವಾಗಿರುವ ಸಮಾಜ ಭಾರತದಲ್ಲಿ ನೆಲಸಲಿದೆ. ಭಾರತವು ಮುಂದಿನ ದಿನಗಳಲ್ಲಿ ಶೇ.  9-10 ರಷ್ಟು ವೇಗದಲ್ಲಿ ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ," ಎಂದು ಅಮಿತಾಬ್ ಕಾಂತ್ ಹೇಳಿದ್ದಾರೆ.
SCROLL FOR NEXT