ದೇಶ

ರಾಜಸ್ಥಾನ: ಗೋರಕ್ಷಕರ ಸೋಗಿನಲ್ಲಿ ವ್ಯಕ್ತಿಯ ಗುಂಡಿಟ್ಟು ಕೊಂದು ಶವವನ್ನು ರೈಲ್ವೇ ಹಳಿಗೆಸೆದ ದುಷ್ಕರ್ಮಿಗಳು!

Srinivasamurthy VN
ಜೈಪುರ: ಅಕ್ರಮ ಗೋ ಸಾಗಣೆ ಮಾಡುತ್ತಿದ್ದರು ಎಂಬ ಆರೋಪದ ಮೇರೆಗೆ ಓರ್ವ ವ್ಯಕ್ತಿಯನ್ನು ಗುಂಡಿಟ್ಟು ಕೊಂದಿರುವ ವಿಕೃತ ಘಟನೆ ರಾಜಸ್ಥಾನದ ಆಳ್ವಾರ್ ನಲ್ಲಿ ನಡೆದಿದೆ.
ನ್ಯೂಸ್ 18 ವರದಿ ಮಾಡಿರುವಂತೆ ಕಳೆದ ನವೆಂಬರ್ 10ರಂದು ಈ ಘಟವೆ ನಡೆದಿದ್ದು, ಉಮ್ಮರ್ ಮೊಹಮದ್ ಎಂಬಾತನನ್ನು ಗುಂಡಿಟ್ಟುಕೊಂದು ಬಳಿಕ ಶವವನ್ನು ರೈಲ್ವೇ ಹಳಿ ಮೇಲೆ ಬಿಸಾಡಲಾಗಿದೆ. ವರದಿಯಲ್ಲಿರುವಂತೆ  ಉಮ್ಮರ್ ಮೊಹಮದ್ ಮತ್ತು ಆತನ ಇಬ್ಬರು ಸಹಚರರು ಗೋವಿಂದ್ ಘಡ್ ನ ಆಳ್ವಾರ್ ಬಳಿಯ ಫಹಾರಿ ಗ್ರಾಮಕ್ಕೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದರು ಎಂದು ಆರೋಪಿಸಿ ಕೆಲ ದುಷ್ಕರ್ಮಿಗಳ ಗುಂಪು ಉಮ್ಮರ್  ಮೊಹಮದ್ ಮತ್ತು ಆತನ ಸ್ನೇಹಿತರ ಮೇಲೆ ದಾಳಿ ಮಾಡಿದೆ. ಈ ವೇಳೆ ಉಮ್ಮರ್ ಜೊತೆಗಿದ್ದು ಇಬ್ಬರು ಸಹಚರರು ಗಾಯಗೊಂಡಿದ್ದು, ಉಮ್ಮರ್ ಗೆ ದುಷ್ಕರ್ಮಿಗಳು ಗುಂಡಿಟ್ಟು ಕೊಂದು ಹಾಕಿದ್ದಾರೆ ಬಳಿಕ ಶವವನ್ನು ಆಳ್ವಾರ್  ಸಮೀಪದ ರೈಲ್ವೇ ಹಳಿಗಳ ಮೇಲೆ ಎಸೆದು ಹೋಗಿದ್ದಾರೆ. 
ಪ್ರಸ್ತುತ ಉಮ್ಮರ್ ನ ಮಾವ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದು, ಗೋರಕ್ಷಕರು ಉಮ್ಮರ್ ನನ್ನು ಕೊಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಮೃತ ಉಮ್ಮರ್ ಗೆ ಓರ್ವ ಪತ್ನಿ ಹಾಗೂ 8 ಜನ ಮಕ್ಕಳಿದ್ದರು  ಎಂದು ತಿಳಿದುಬಂದಿದೆ. ಇದೀಗ ಕೊಲೆಗೈದ ದುಷ್ಕರ್ಮಿಗಳ ವಿರುದ್ಧ ವ್ಯಾಪತ ಆಕ್ರೋಶ ವ್ಯಕ್ತವಾಗುತ್ತಿದ್ದು. ಮಿಯೋ ಸಮುದಾಯದ ಮುಖ್ಯಸ್ಥರು ಗೋರಕ್ಷಕರು ಎಂದು ಹೇಳಿಕೊಂಡು ಹತ್ಯೆಗೈದ ದುಷ್ಕರ್ಮಿಗಳ ವಿರುದ್ಧ  ಕಿಡಿಕಾರಿದ್ದಾರೆ. ಅಂತೆಯೇ ಒಂದು ವೇಳೆ ಆತ ಅಕ್ರಮವಾಗಿ ಗೋ ಸಾಗಣೆ ಮಾಡುತ್ತಿದ್ದರೂ ಆತನನ್ನು ಪೊಲೀಸರಿಗೆ ಒಪ್ಪಿಸಬಹುದಿತ್ತು. ಕೊಲೆ ಮಾಡಲು ಇವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಇಂತಹುದೇ ಘಟನೆ ಈ ಹಿಂದೆ ಹರ್ಯಾಣದಲ್ಲೂ ನಡೆದಿತ್ತು. ಪೆಹ್ಲು ಖಾನ್ ಎಂಬ ವ್ಯಕ್ತಿ ಮೇಲೆ ಗೋರಕ್ಷಕರು ಎಂದು ಹೇಳಿಕೊಂಡ ಗುಂಪು ಮನಸೋ ಇಚ್ಛೆ ದಾಳಿ ನಡೆಸಿತ್ತು.
SCROLL FOR NEXT