ದೇಶ

ನ್ಯಾಯಾಧೀಶರಿಗೆ ಲಂಚ ಪ್ರಕರಣ: ಎಸ್ಐಟಿ ತನಿಖೆ ಕೋರಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ

Sumana Upadhyaya
ನವದೆಹಲಿ: ನ್ಯಾಯಾಧೀಶರುಗಳ ಹೆಸರಿನಲ್ಲಿ ಲಂಚ ಸ್ವೀಕರಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವಿಚಾರಣೆಗೆ ಒಪ್ಪಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
ಇಂತಹ ಮನವಿಗಳು ನ್ಯಾಯಾಧೀಶರ ಸಮಗ್ರತೆ ಬಗ್ಗೆ ಅನಗತ್ಯ ಸಂಶಯವನ್ನು ಹುಟ್ಟುಹಾಕುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಖ್ಯಾತ ವಕೀಲ ಕಾಮಿನಿ ಜೈಸ್ವಾಲ್ ಅವರು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಸಿಬಿಐ ಸಲ್ಲಿಸಿದ ಎಫ್ಐಆರ್ ಯಾವುದೇ ನ್ಯಾಯಾಧೀಶರ ವಿರುದ್ಧವಾಗಿ ಇಲ್ಲ ಮತ್ತು ಅದು ನ್ಯಾಯಾಧೀಶರೊಬ್ಬರ ವಿರುದ್ಧ ದೂರು ಸಲ್ಲಿಸಲು ಸಾಧ್ಯ ಕೂಡ ಇಲ್ಲ ಎಂದು ಹೇಳಿದೆ.
ಆದರೆ, ಜೈಸ್ವಾಲ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದಿಲ್ಲ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಆರ್.ಕೆ.ಅಗ್ರವಾಲ್, ಅರುಣ್ ಮಿಶ್ರಾ ಮತ್ತು ಎ.ಎಂ.ಖಾನ್ವಿಲ್ಕರ್ ಅವರನ್ನೊಳಗೊಂಡ ನ್ಯಾಯಪೀಠ, ಪ್ರಕರಣದಲ್ಲಿ ನ್ಯಾಯಾಧೀಶರೊಬ್ಬರನ್ನು ಲಂಚ ನೀಡಿ ತಮ್ಮತ್ತ ಸೆಳೆದುಕೊಳ್ಳಲು ಮಾಡಿದ ಪ್ರಯತ್ನಗಳು ಫೋರಮ್ ಶಾಪಿಂಗ್ ಎನಿಸುವುದಿಲ್ಲ ಎಂದು ಹೇಳಿ ಜೈಸ್ವಾಲ್ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಳ್ಳಿ ಹಾಕಿದ್ದಾರೆ.
ಯಾವುದೇ ಪ್ರಕರಣದಲ್ಲಿ ತಮ್ಮ ಪರವಾಗಿ ತೀರ್ಪು ಬರಬೇಕೆಂದು ತಮಗೆ ಬೇಕಾದ ನ್ಯಾಯಾಧೀಶರನ್ನು ನೇಮಿಸುವುದಕ್ಕೆ ಫೋರಮ್ ಶಾಪಿಂಗ್ ಎಂದು ಕರೆಯುತ್ತಾರೆ.
ಹಿರಿಯ ನ್ಯಾಯಾಧೀಶರಾದ ಶಾಂತಿ ಭೂಷಣ್ ಮತ್ತು ಪ್ರಶಾಂತ್ ಭೂಷಣ್ ಮೂಲಕ ಪ್ರಕರಣದ ತನಿಖೆಯಿಂದ ನ್ಯಾಯಮೂರ್ತಿ ಖನ್ವಿಲ್ಕರ್ ಅವರನ್ನು ತೆಗೆದುಹಾಕಬೇಕೆಂದು ಜೈಸ್ವಾಲ್ ಮನವಿ ಸಲ್ಲಿಸಿದ್ದರು. ಸ್ವತಃ ಖನ್ವಿಲ್ಕರ್ ಕೂಡ ಕೇಸಿನ ವಿಚಾರಣೆಯಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ.
ಪರಿಮಾಮಕಾರಿ ತೀರ್ಮಾನ ಕೊಡಲು ಮತ್ತು ನಿಸ್ಪಕ್ಷಪಾತ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಮನಗಂಡರೆ ನ್ಯಾಯಾಧೀಶರು ಆ ಪ್ರಕರಣದ ವಿಚಾರಣೆಯಿಂದ ಅವರಾಗಿಯೇ ಹೊರಬರುವುದನ್ನು ರೆಕ್ಯೂಸ್ ಎಂದು ಕರೆಯಲಾಗುತ್ತದೆ. 
ಈ ಬಗ್ಗೆ ಇಂದು ಜೈಸ್ವಾಲ್ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ನಾವ್ಯಾರು ಕಾನೂನಿನಿಂದ ಮೇಲಿನವರಲ್ಲ, ಆದರೆ ಕೆಲವು ಪ್ರಕ್ರಿಯೆಗಳನ್ನು ಪಾಲಿಸಬೇಕಾಗುತ್ತದೆ. ನ್ಯಾಯಾಧೀಶರ ಆದೇಶದಂತೆ ನ್ಯಾಯಾಧೀಶರ ವಿರುದ್ಧ ಯಾವುದೇ ಎಫ್ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಮೆಡಿಕಲ್ ಕಾಲೇಜು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಡಿಶಾ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಇಶ್ರತ್ ಮಸ್ರೂರ್ ಖುದ್ದುಸಿ ವಿರುದ್ಧವೇ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಬೇಕೆಂದು ಜೈಸ್ವಾಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
SCROLL FOR NEXT