ದೇಶ

ಇಂದು ಪಂಡಿತ್ ನೆಹರೂ ಜನ್ಮ ದಿನಾಚರಣೆ: ಗೌರವ ನಮನ ಸಲ್ಲಿಸಿದ ರಾಷ್ಟ್ರ ನಾಯಕರು

Sumana Upadhyaya
ನವದೆಹಲಿ: ಭಾರತದ ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರ 128ನೇ ಜನ್ಮ ದಿನಾಚರಣೆ ಇಂದು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೆಹರೂ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಪಂಡಿತ್ ಜವಹರಲಾಲ್ ನೆಹರೂ ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇಂದು ಬೆಳಗ್ಗೆ ದೆಹಲಿಯ ಶಾಂತಿವನದಲ್ಲಿರುವ ನೆಹರೂ ಸ್ಮಾರಕ ಬಳಿ ತೆರಳಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಗೌರವ ನಮನ ಸಲ್ಲಿಸಿದರು. ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕೂಡ ಮೊದಲ ಪ್ರಧಾನಿಗೆ ನಮನ ಸಲ್ಲಿಸಿದ್ದಾರೆ. 
ಪಂಡಿತ್ ನೆಹರೂ ಅವರು ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ 1947, ಆಗಸ್ಟ್ 15ರಂದು ಅಧಿಕಾರ ವಹಿಸಿಕೊಂಡರು. ಭಾರತ ಅದಾಗ ತಾನೇ ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಿತ್ತು.
ಅವರು ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ನವೆಂಬರ್ 14, 1889ರಲ್ಲಿ ಜನಿಸಿ ಮೇ 27, 1964ರಲ್ಲಿ ನಿಧನರಾದರು.
ನೆಹರೂ ಅವರಿಗೆ ಮಕ್ಕಳ ಮೇಲೆ ಅಗಾಧ ಪ್ರೀತಿ ಇದ್ದದ್ದರಿಂದ ಅವರ ಜನ್ಮದಿನವನ್ನು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. 
ಪಂಡಿತ್ ನೆಹರೂ ಅವರು 1919ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ್ನು ಸೇರಿದ್ದರು. ನಂತರ ಮಹಾತ್ಮಾ ಗಾಂಧಿಯವರೊಂದಿಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. 1923ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕೂಡ ಆಯ್ಕೆಯಾದರು.
ತಮ್ಮ ಸಾವಿನ ದಿನದವರೆಗೂ ಅಧಿಕಾರದಲ್ಲಿದ್ದ ನೆಹರೂ ಇದುವರೆಗೆ ಅತಿ ದೀರ್ಘಾವಧಿಯಲ್ಲಿದ್ದ ಪ್ರಧಾನ ಮಂತ್ರಿ ಎನಿಸಿಕೊಂಡಿದ್ದಾರೆ.
SCROLL FOR NEXT