ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಿತಿ ಮೀರುತ್ತಿರುವ ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕುವುದಕ್ಕಾಗಿ ದೆಹಲಿ ಆಪ್ ಸರ್ಕಾರ ಅಲ್ಪಾವಧಿ ಯೋಜನೆ ಸಿದ್ಧಪಡಿಸಿದ್ದು, 2017ರಲ್ಲಿ ಸಂಗ್ರಹಿಸಿದ 787 ಕೋಟಿ ರುಪಾಯಿ ಪರಿಸರ ಸೆಸ್ ಅನ್ನು ಬಸ್ ಗಳ ಖರೀದಿಗೆ ಬಳಸಿಕೊಳ್ಳುವುದಾಗಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಿನ್ನೆ ಸಂಜೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಪರಿಸರ ಸೆಸ್ ಹಣವನ್ನು ಬಸ್ ಗಳ ಖರೀದಿಗೆ ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ವಾಯು ಮಾಲಿನ್ಯ ನಿಯಂತ್ರಿಸುವುದಕ್ಕಾಗಿ ದೆಹಲಿ ಸರ್ಕಾರ ಒಂದು ವರ್ಷದ ಅಲ್ಪಾವಧಿ ಯೋಜನೆ ಸಿದ್ಧಪಡಿಸಿದ್ದು, ಒಂದು ವರ್ಷದ ಅವಧಿಯಲ್ಲಿ ಒಟ್ಟು 500 ವಿದ್ಯುತ್ ಚಾಲಿತ ಬಸ್ ಗಳನ್ನು ಖರೀದಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಟ್ಯಾಂಡರ್ಡ್ ಮತ್ತು ಮಧ್ಯಮ ಗಾತ್ರದ ಎರಡು ರೀತಿಯ ಬಸ್ ಗಳನ್ನು ಖರೀದಿಸಲು ಸರ್ಕಾರ ಯೋಜನೆ ರೂಪಿಸಿದೆ. ಸ್ಟ್ಯಾಂಡರ್ಡ್ ಗಾತ್ರದ ಬಸ್ ಬೆಲೆ 2.6 ಕೋಟಿಯಾಗಿದ್ದು, ಮಧ್ಯಮ ಗಾತ್ರದ ಬಸ್ ಬೆಲೆ 1.6 ಕೋಟಿ ರುಪಾಯಿ ಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಇದೇ ವೇಳೆ ದೆಹಲಿ ಸರ್ಕಾರ ಹಣಕಾಸಿನ ಕೊರತೆ ಎದುರಿಸುತ್ತಿಲ್ಲ ಎಂಬ ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಜ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಅಧಿಕಾರಿ, ಬಸ್ ಖರೀದಿಸಲು ನಮ್ಮ ಬಳಿ ಹಣ ಇದೆ. ಆದರೆ ಅವುಗಳನ್ನು ನಿಲ್ಲಿಸಲು ಜಾಗ ಇಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics