ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆರ್ಥಿಕ ವಿಪತ್ತು ಸೃಷ್ಟಿಸುವುದನ್ನು ಕರಗತ ಮಾಡಿಕೊಂಡಿದೆ ಎಂದು ಆರೋಪಿಸಿದೆ.
ಮೋದಿ ಸರ್ಕಾರವೆಂಬ ವಿಪತ್ತು ಕಳೆದ 3 ವರ್ಷಗಳಿಂದ ದೇಶದ ಆರ್ಥಿಕತೆಯನ್ನು ಸ್ಥಗಿತಗೊಳಿಸಿದೆ, ನೋಟು ನಿಷೇಧವಾಗಲಿ, ಅಥವಾ ಜಿಎಸ್ ಟಿಯಾಗಲಿ, ಮೋದಿ ಸರ್ಕಾರ ಭಾರತದ ಆರ್ಥಿಕತೆ ಮೇಲೆ ಒಂದರ ಮೇಲೆ ಒಂದರಂತೆ ಪೆಟ್ಟು ನೀಡಿದೆ ಎಂದು ಕಾಂಗ್ರೆಸ್ ನ ವಕ್ತಾರ ಆರ್ ಪಿಎನ್ ಸಿಂಗ್ ಹೇಳಿದ್ದಾರೆ.
ದೇಶದ ಅತ್ಯಂತ ಬಲಿಷ್ಥ ವ್ಯಾಪಾರ ವಹಿವಾಟಿನ ಮೂಲಭೂತ ಅಂಶಗಳನ್ನು ಕುಗ್ಗಿಸಿರುವುದೇ ಮೋದಿನಾಮಿಕ್ಸ್ ನ ಸಾಧನೆಯಾಗಿದ್ದು, ರಫ್ತು ಪ್ರಮಾಣ ಕುಗ್ಗಿದ್ದು, ವ್ಯಾಪಾರದ ಕೊರತೆ ಉಂಟಾಗುವಂತೆ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.