ನವದೆಹಲಿ: ಭಾರತದ ಪುರಾತನ ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಕಸರತ್ತು ಯೋಗವನ್ನು ಕಟ್ಟರ್ ಮುಸ್ಲಿಮವಾದಿ ದೇಶವಾಗಿರುವ ಸೌದಿ ಅರೇಬಿಯಾ ಕ್ರೀಡಾ ಚಟುವಟಿಕೆ ಎಂದು ಪರಿಗಣಿಸಿ ಅಧಿಕೃತ ಮಾನ್ಯತೆ ನೀಡಿರುವುದನ್ನು ಮುಸ್ಲಿಂ ಮೌಲ್ವಿಗಳು ಬುಧವಾರ ಸ್ವಾಗತಿಸಿದ್ದಾರೆ.
ಯೋಗವನ್ನು ಕ್ರೀಡಾ ಚಟುವಟಿಕೆ ಎಂದು ಪರಿಗಣಿಸಿ ಮಾನ್ಯತೆ ನೀಡುವಂತೆ 2005ರಿಂದಲೂ ಮಾರ್ಮಾನಿ ಪ್ರಯತ್ನ ನಡೆಸುತ್ತಿದ್ದರು. ಕೊನೆಗೆ ಮಾರ್ವಾನಿ ಅವರು ಸೌದಿಯ ರಾಜಕುಮಾರಿ ರೀಮಾ ಬಿಂಟ್ ಬಂಡಾರ್ ಅಲ್ಸೌದ್ ಮೊರೆ ಹೋಗಿದ್ದರು. ಮಹಿಳೆಯರಿಗೆ ಕ್ರೀಡೆ ಹಾಗೂ ವಾಹನ ಚಾಲನಾ ಪರವಾನಗಿ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ರೀಮಾ ದೆಸೆಯಿಂದಾಗಿ ಯೋಗಕ್ಕೂ ಇದೀಗ ಮಾನ್ಯತೆ ಲಭಿಸಿದೆ.
ಯೋಗಾಭ್ಯಾಸಕ್ಕೆ ಮಾನ್ಯತೆ ನೀಡಿರುವ ನಿರ್ಧಾರವನ್ನು ಮುಸ್ಲಿಂ ಮೌಲ್ವಿ ಮೌಲಾನಾ ಸಾಜಿದ್ ರಷಿದಿಯವರು ಸ್ವಾಗತಿಸಿದ್ದು, ಇಸ್ಲಾಂನಲ್ಲಿ ಯೋಗವನ್ನು ನಿಷೇಧಿಸಿಲ್ಲ. ಆರೋಗ್ಯಯುತ ದೇಹಕ್ಕೆ ಯೋಗದ ಅಗತ್ಯವಿದೆ. ಇಂತಹದ್ದನ್ನು ಇಸ್ಲಾಂ ಎಂದಿಗೂ ವಿರೋಧಿಸಿಲ್ಲ. ಸೂರ್ಯ ನಮಸ್ಕಾರದ ಬಗ್ಗೆ ಮಾತನಾಡಿದಾಗ ಜನರು ಅದನ್ನು ದೊಡ್ಡ ವಿಷಯವಾಗಿ ಮಾಡುತ್ತಾರೆ. ಯೋಗ ಹಿಂದೂ ಧರ್ಮದ ಜೊತೆಗೆ ಹೊಂದಿಕೊಂಡಿದೆ. ಆರೋಗ್ಯವನನ್ನು ಒಂದು ಧರ್ಮದೊಂದಿಗೆ ಜೋಡಣೆ ಮಾಡಬಾರದು. ಹೀಗಾಗಿ ಸೌದಿ ಯೋಗವನ್ನು ಪರಿಗಣಿಸಿ, ಈ ರೀತಿಯ ನಿರ್ಧಾರವನ್ನು ಕೈಗೊಂಡಿದೆ. ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆಂದು ಹೇಳಿದ್ದಾರೆ.