ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಯಕ್
ದೆಹಲಿ: ಅಯೋಧ್ಯೆ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ನೀಡುವ ಆದೇಶವೇ ಅಂತಿಮ ಎಂದು ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಯಕ್ ಅವರು ಬುಧವಾರ ಹೇಳಿದ್ದಾರೆ.
ಧಾರ್ಮಿಕ ಗುರು ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿ ಶಂಕರ್ಮತ್ತು ಉತ್ತರಪ್ರದೇಸ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ರಾಮಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ವಿವಾದ ಇತ್ಯರ್ಥಪಡಿಸಲು ರವಿ ಶಂಕರ್ ಅವರು ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ. ಅಯೋಧ್ಯೆ ವಿವಾದ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಈ ಹಿಂದೆಯೇ ಆದೇಶ ನೀಡಿದ್ದ ಸುಪ್ರೀಂಕೋರ್ಟ್, ನ್ಯಾಯಾಲಯದ ಹೊರದೆ ವಿವಾದ ಇತ್ಯರ್ಥಪಡಿಸಿಕೊಳ್ಳುವಂತೆ ಹೇಳಿತ್ತು. ಸಂಬಂಧಪಟ್ಟಂತಹ ನಾಯಕರು ಪರಿಹಾರದೊಂದಿಗೆ ವಿವಾದ ಇತ್ಯರ್ಥಪಡಿಸಲು ಮುಂದೆ ಬಂದರೆ ಅದು ಉತ್ತಮವಾದ ಬೆಳವಣಿಗೆ ಎಂದು ಹೇಳಿದ್ದಾರೆ.
ಮಾತುಕತೆ ಮೂಲಕ ಅಯೋಧ್ಯೆ ವಿವಾದ ಬಗೆಹರಿಸಲು ರವಿ ಶಂಕರ್ ಅವರು ಮುಂದಾಗಿದ್ದು, ಅವರಿಗೆ ಯಶಸ್ವಿ ದೊರೆಯಲಿ ಎಂದು ಆಶಿಸುತ್ತೇನೆ. ಆದರೆ, ವಿವಾದ ಕುರಿತಂತೆ ಸುಪ್ರೀಂಕೋರ್ಟ್ ನೀಡುವ ಆದೇಶವೇ ಅಂತಿಮವಾಗಿರುತ್ತದೆ. ನ್ಯಾಯಾಲಯದ ಆದೇಶವನ್ನು ಪ್ರತೀಯೊಬ್ಬರೂ ಒಪ್ಪಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಇದೇ ವೇಳೆ ವಿವಾದ ಕುರಿತಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಮುಸ್ಲಿಂ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಕುರಿತಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ರಾಜಕೀಯ ಪ್ರೇರಿತ ಹೇಳಿಕೆಯನ್ನು ನನ್ನಿಂದ ಬಯಸಬಾರದು, ನನ್ನ ಸ್ಥಾನಕ್ಕೆ ಗೌರವವಿದ್ದು, ಒಂದು ರಾಜ್ಯದ ರಾಜ್ಯಪಾಲ ಸ್ಥಾನದಲ್ಲಿದ್ದು ರಾಜಕೀಯ ಪ್ರೇರಿತ ಹೇಳಿಕೆಯನ್ನು ನಾನು ನೀಡುವುದಿಲ್ಲ ಎಂದಿದ್ದಾರೆ.