ದೇಶ

ವಾಯುಮಾಲಿನ್ಯ ನಿಯಂತ್ರಣಕ್ಕೆ ಕೃತಕ ಮಳೆ ಮೊರೆ ಹೋದ ಯೋಗಿ ಸರ್ಕಾರ!

Srinivasamurthy VN
ಲಖನೌ: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವಾಯು ಮಾಲಿನ್ಯ ಮಿತಿ ಮಿರಿರುವಂತೆಯೇ ಇತ್ತ ಉತ್ತರ ಪ್ರದೇಶ ಸರ್ಕಾರ ಎಚ್ಚೆತ್ತುಕೊಂಡಿದ್ದು, ರಾಜ್ಯದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಕೃತಕ  ಮಳೆಯ ಮೊರೆ ಹೋಗಲು ನಿರ್ಧರಿಸಿದೆ.
ಲಖನೌ ಮತ್ತು ಕಾನ್ಪುರದಲ್ಲಿರುವ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೇಂದ್ರಗಳ ತಜ್ಞರ ಸಹಯೋಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಕೃತಕ ಮಳೆ ತರಿಸುವ ಸಲುವಾಗಿ ಮೋಡ ಬಿತ್ತನೆ ಕಾರ್ಯಕ್ಕೆ  ಚಾಲನೆ ನೀಡುವಂತೆ ಸಿಎಂ ಯೋಗಿ ಆದಿತ್ಯಾನಾಥ್ ಅಧಿಕಾರಿಗಳಿಗೆ ಸೂಚಸಿದ್ದಾರೆ.
ಈ ಬಗ್ಗೆ ಸ್ವತಃ ಸಿಎಂ ಯೋಗಿ ಆದಿತ್ಯಾನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ರಾಜ್ಯದಲ್ಲಿ ಕಸಕ್ಕೆ ಬೆಂಕಿ ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ವಿವಿಧ ಮುನ್ಸಿಪಲ್ ಕಾರ್ಪೋರೇಷನ್ ಗಳಿಗೆ ಸೂಚನೆ ನೀಡಿದ್ದಾರೆ.  ಅಂತೆಯೇ ಗದ್ದೆಗಳಿಗೆ ಬೆಂಕಿ ಹಾಕದಂತೆ ಮುಖ್ಯವಾಗಿ ಬೆಳೆಗಳ ಬಣವೆಗಳಿಗೆ ಬೆಂಕಿ ಹಾಕಿ ನಾಶಪಡಿಸದಂತೆ ರೈತರಲ್ಲಿ ಮನವಿ ಮಾಡಲು ಜಾಗೃತಿ ಅಭಿಯಾನ ನಡೆಸುವಂತೆ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದ್ದಾರೆ. ಇದರ  ಹೊರತಾಗಿ ರಸ್ತೆಗಳ ಮೇಲೆ ನೀರು ಚುಮುಕಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಅದರಿಂದ ಧೂಳಿನ ಕಣಗಳು ಮೇಲೇಳದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಇನ್ನು ಪ್ರಸ್ತುತ ರಾಜ್ಯ ಸರ್ಕಾರ ಕೈಗೊಂಡಿರುವ ವಾಯು ಮಾಲಿನ್ಯ ವಿರುದ್ಧದ ಜಾಗೃತಿ ಅಭಿಯಾನವನ್ನು ಜನವರಿ 15ರವರೆಗೂ ಮುಂದುವರೆಸುವಂತೆ ಸೂಚನೆ ನೀಡಿದ್ದಾರೆ. ರೇಡಿಯೋ, ಟಿವಿ ಮತ್ತು ಸಮುದಾಯ ರೇಡಿಯೋಗಳಲ್ಲಿ  ನಿರಂತರ ಜಾಗೃತಿ ಅಭಿಯಾನ ನಡೆಸುವಂತೆ ಸೂಚನೆ ನೀಡಿದ್ದಾರೆ. ಕಾರ್ಯಕ್ರಮಗಳಲ್ಲಿ ರೈತರು ಭತ್ತದ ಬಣವೆಗಳನ್ನು ಬೆಂಕಿಗೆ ಹಾಕದಂತೆಯೂ ಕೇಳಿಕೊಂಡಿದ್ದಾರೆ.
SCROLL FOR NEXT