ದೇಶ

ದೆಹಲಿ: ಮುಂದಿನ ವರ್ಷದಿಂದ ಮನೆ ಬಾಗಿಲಿಗೆ ಬರಲಿದೆ ಡಿಎಲ್, ಜಾತಿ ಪ್ರಮಾಣಪತ್ರ

Lingaraj Badiger
ನವದೆಹಲಿ: ಇನ್ನು ಮೂರು-ನಾಲ್ಕು ತಿಂಗಳಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ಚಾಲನಾ ಪರವಾನಗಿ(ಡಿಎಲ್) ಸೇರಿದಂತೆ 40 ಸಾರ್ವಜನಿಕ ಸೇವೆಗಳನ್ನು ಮನೆ ಬಾಲಿಗೆ ಒದಗಿಸುವ ಯೋಜನೆ ಜಾರಿಗೊಳಿಸುವುದಾಗಿ ಗುರುವಾರ ದೆಹಲಿ ಸರ್ಕಾರ ಘೋಷಿಸಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು, ದೇಶದ ಇದೇ ಮೊದಲ ಬಾರಿಗೆ 'ಮನೆ ಬಾಲಿಗೆ ಸರ್ಕಾರ' ಬರುತ್ತಿದೆ ಎಂದರು.
ಜಾತಿ ಪ್ರಮಾಣ ಪತ್ರ ಹಾಗೂ ಚಾಲನಾ ಪರವಾನಗಿ(ಡಿಎಲ್) ಸೇರಿದಂತೆ 40 ಸಾರ್ವಜನಿಕ ಸೇವೆಗಳನ್ನು ಮನೆ ಬಾಲಿಗೆ ಒದಗಿಸಲು ಖಾಸಗಿ ಸಂಸ್ಥೆಯೊಂದನ್ನು ನಿಯೋಜಿಸಲಾಗಿದ್ದು, ಜಾತಿ ಪ್ರಮಾಣಪತ್ರ, ಹೊಸದಾಗಿ ನೀರಿನ ಸಂಪರ್ಕ, ಆದಾಯ ತೆರಿಗೆ, ಚಾಲನಾ ಪರವಾನಗಿ, ಪಡಿತರ ಚೀಟಿ, ಮದುವೆ ನೋಂದಣಿ, ವಿಳಾಸ ಬದಲಾವಣೆ ಸೇರಿದಂತೆ 40 ಅಗತ್ಯ ಸೇವೆಗಳು ಈ ಯೋಜನೆಯಡಿ ತರಲಾಗಿದೆ ಎಂದು ಸಿಸೋಡಿಯಾ ತಿಳಿಸಿದ್ದಾರೆ.
ಈ ಯೋಜನೆ ಜಾರಿಗಾಗಿ ಕಾಲ್ ಸೆಂಟರ್ ಗಳನ್ನು ಆರಂಭಿಸಲಾಗುತ್ತಿದ್ದು, ಡಿಎಲ್ ಗಾಗಿ ಅಥವಾ ಜಾತಿ ಪ್ರಮಾಣ ಪತ್ರಕ್ಕಾಗಿ ಸಾರ್ವಜನಿಕರು ತಮ್ಮ ಮೊಬೈಲ್ ನಿಂದ ಈ ಕಾಲ್ ಸೆಂಟರ್ ಗಳಿಗೆ ಕರೆ ಮಾಡಿ, ವಿವರ ನೀಡಿದರೆ ಸಾಕು ಪ್ರಮಾಣ ಪತ್ರವನ್ನು ಅವರ ಮನೆಗೆ ತಲುಪಿಸಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಇದಕ್ಕಾಗಿ 'ಮೊಬೈಲ್ ಸಹಾಯಕ್' ವ್ಯವಸ್ಥೆ ಮಾಡಲಾಗಿದ್ದು, ಅವರು ನಿಮ್ಮ ಮನೆಗೆ ಬಂದು ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
SCROLL FOR NEXT