ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪ್ರಿಯರಂಜನ್ ದಾಸ್ ಮುನ್ಶಿ
ನವದೆಹಲಿ: 9 ವರ್ಷಗಳ ಕಾಲ ಕೋಮಾದಲ್ಲಿದ್ದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪ್ರಿಯರಂಜನ್ ದಾಸ್ ಮುನ್ಶಿಯವರು ಸೋಮವಾರ ನಿಧನರಾಗಿದ್ದಾರೆ.
ಮಾಜಿ ಸಂಸದ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ಪ್ರಿಯರಂಜನ್ ದಾಸ್ ಮುನ್ಶಿ ಅವರಿಗೆ 2008ರ ಅ.12 ರಂದು ಹೃದಯಘಾತ ಹಾಗೂ ಪಾರ್ಶ್ವವಾಯು ಎದುರಾಗಿತ್ತು. ಬಳಿಕ ಕೋಮಾಗೆ ಜಾರಿದ್ದರು. ಇಂದು ಮಧ್ಯಾಹ್ನ ನವದೆಹಲಿ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.
ದಾಸ್ ಮುನ್ಶಿಯವರನ್ನು ಮೊದಲಿಗೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಪೊಲೋ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಮುನ್ಶಿಯವರ ಆರೋಗ್ಯ ಸ್ಥಿತಿ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಆಪೋಲೋ ಆಸ್ಪತ್ರೆ, ಕಳೆದ ಒಂದು ತಿಂಗಳಿನಿಂದಲೂ ಮುನ್ಶಿಯವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ದೇಹ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಕುತ್ತಿಗೆಗೆ ಅಳವಡಿಸಿದ್ದ ಟ್ಯೂಬ್ ಮೂಲಕ ಉಸಿರಾಡುತ್ತಿದ್ದರು. ಪಿಇಜಿ ಕೊಳವೆ ಮೂಲಕ ಆಹಾರವನ್ನು ನೀಡಲಾಗುತ್ತಿತ್ತು. ರಕ್ತದ ಒತ್ತಡ, ನಿದ್ದೆ, ಎಚ್ಚರಗೊಳ್ಳುವಿಕೆ ಹಾಗೂ ಉಸಿರಾಟ ಸ್ಥಿರವಾಗಿತ್ತು. ಆದರೆ, ಅವರ ಸುತ್ತಮುತ್ತ ಏನಾಗುತ್ತಿದೆ ಎಂಬುದು ಮಾತ್ರ ತಿಳಿಯುತ್ತಿರಲಿಲ್ಲ ಎಂದು ಹೇಳಿದೆ.
ದಾಸ್ ಮುನ್ಶಿಯವರು ಪಶ್ಚಿಮ ಬಂಗಾಳದ ರಾಯಗಂಜ್ ಲೋಕಸಭಾ ಕೇತ್ರವನ್ನು ಪ್ರತಿನಿಧಿಸಿದ್ದರು. 1970ರಿಂದ 1971ರವರೆಗೆ ಪಶ್ಚಿಮ ಬಂಗಾಳದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತದ ಅವಧಿಯಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ಮುನ್ಶಿಯವರು ಅಶ್ಲೀಲ ಹೂರಣ ಹೊಂದಿವೆ ಎಂಬ ಕಾರಣಕ್ಕೆ ಎಎಕ್ಸ್ಎನ್ ಮತ್ತು ಫ್ಯಾಶನ್ ಟಿವಿ ಸೇರಿದಂತೆ ಪಾಶ್ಚಾತ್ಯ ಟಿವಿಗಳಿಗೆ ನಿಷೇಧ ಹೇರಿದ್ದರು.
ದಾಸ್ ಮುನ್ಶಿಯವರು ಪತ್ನಿ ದೀಪಾ ದಾಸ್ ಮುನ್ಶಿ ಮತ್ತು ಪುತ್ರ ಪ್ರಿಯದೀಪ್ ದಾಸ್ ಮುನ್ಶಿಯವರನ್ನು ಅಗಲಿದ್ದಾರೆ.
ದಾಸ್ ಮುನ್ಶಿಯವರ ಅವರು ನಿಧನ ಹೊಂದಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಸಂತಾಪ ಸೂಚಿಸಿದ್ದಾರೆ.
ದಾಸ್ ಮುನ್ಶಿಯವರು ಪಶ್ಚಿಮ ಬಂಗಾಳ ಅತ್ಯಂತ ಹಿರಿಯ ರಾಜಕೀಯ ನಾಯಕರಾಗಿದ್ದರು. ದೇಶಕ್ಕಾಗಿ ದಾಸ್ ಅವರು ಮಾಡಿರುವ ಅಗಾಧ ಕಾರ್ಯವನ್ನು ಎಂದಿಗೂ ನೆನೆಯುತ್ತೇವೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics