ಕೈ ಕಾರ್ಯಕರ್ತರು ಮತ್ತು ಪಟೇಲ್ ಸಮುದಾಯದ ನಡುವೆ ಮಾರಾಮಾರಿ
ಸೂರತ್: ತೀವ್ರ ಕುತೂಹಲ ಕೆರಳಿಸಿರುವ ಪ್ರಧಾನಿ ಮೋದಿ ತವರು ಗುಜರಾತ್ ವಿಧಾನಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಭಾರಿ ಪೈಪೋಟಿ ವ್ಯಕ್ತವಾಗುತ್ತಿದ್ದು, ಟಿಕೆಟ್ ಗಾಗಿ ಪಟೇಲ್ ಸಮುದಾಯ, ಕೈ ಕಾರ್ಯಕರ್ತರ ನಡುವೆ ಸಂಘರ್ಷ ಏರ್ಪಟ್ಟಿದೆ.
ದ ಮುಖಂಡ ಹಾರ್ದಿಕ್ ಪಟೇಲ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕರ ನಡುವೆ ಕಗ್ಗಾಂಟಾಗಿದ್ದ ಟಿಕೆಟ್ ಹಂಚಿಕೆ ಸಂಬಂಧ ಉಭಯ ನಾಯಕ ಪರಿಹಾರ ಸೂತ್ರ ಕಂಡುಹಿಡಿದುಕೊಂಡ ಬೆನ್ನಲ್ಲೇ ಇತ್ತ ಅಹ್ಮದಾಬಾದ್ ಮತ್ತು ಸೂರತ್ ನಲ್ಲಿ ಪಾಟಿದಾರ್ ಸಮುದಾಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಟಿಕೆಟ್ ಹಂಚಿಕೆ ಸಂಬಂಧ ನಡೆದಿರುವ ಒಪ್ಪಂದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೇ ಟಿಕೆಟ್ ನೀಡಬೇಕು ಎಂದು ಆಗ್ರಹಿಸಲಾಗುತ್ತಿದೆ.
ಹೀಗಾಗಿ ಟಿಕೆಟ್ ಹಂಚಿಕೆ ಸಂಬಂಧ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಪಾಟಿದಾರ್ ಸಮುದಾಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಪರಿಣಾಮ ಅಹ್ಮದಾಬಾದ್ ಹಾಗೂ ಸೂರತ್ ನಲ್ಲಿರುವ ಕಾಂಗ್ರೆಸ್ ಕಚೇರಿ ಮೇಲೆ ಆಕ್ರೋಶ ಭರಿತ ಕಾರ್ಯಕರ್ತರು ದಾಳಿ ಮಾಡಿದ್ದು, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
ಹಾರ್ದಿಕ್-ಕಾಂಗ್ರೆಸ್ ನಡುವೆ ಒಪ್ಪಂದ
ಪಟೇಲ್ ಮೀಸಲು ಹೋರಾಟದ ರೂವಾರಿ ಹಾರ್ದಿಕ್ ಪಟೇಲ್ ಮತ್ತು ಕಾಂಗ್ರೆಸ್ ನಡುವೆ ಇದ್ದ ಭಿನ್ನಾಭಿ ಪ್ರಾಯಗಳು ಬಗೆಹರಿದಿದ್ದು, ಸೋಮವಾರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ರಾಜ್ ಕೋಟ್ ನಲ್ಲಿ ರಾಜಿಸೂತ್ರವನ್ನು ಹಾರ್ದಿಕ್ ಪಟೇಲ್ ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ. ಪಟೇಲ್ ಮೀಸಲು ಹೋರಾಟ ಸಮಿತಿ ಒತ್ತಾಯಿಸಿದ್ದಂತೆ ಮೀಸಲು ನೀಡುವ ಬಗ್ಗೆ ಸೂತ್ರವನ್ನೂ ಸಿದ್ಧಪಡಿಸಲಾಗಿದೆ ಎಂದು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭರತ್ ಸಿನ್ಹ ಸೋಲಂಕಿ ಹೇಳಿದ್ದಾರೆ. ಪಟೇಲರಿಗೆ ಮೀಸಲು ನೀಡು ವುದರ ಜತೆಗೆ ಹಿಂದುಳಿದ ವರ್ಗದವರಿಗೆ ಹಾಲಿ ಇರುವ ಮೀಸಲು ವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ಸೂತ್ರದ ಬಗ್ಗೆ ಯಾರೂ ಬಾಯಿ ಬಿಟ್ಟಿಲ್ಲ. ಮೀಸಲು ಹೋರಾಟ ಸಮಿತಿ ಸಂಚಾಲಕ ದಿನೇಶ್ ಬೊಮ್ಮಾ ನಿಯಾ ಮಾತನಾಡಿ ಕಾಂಗ್ರೆಸ್ ನಡುವಿನ ಮಾತುಕತೆ ತೃಪ್ತಿದಾಯಕವಾಗಿದೆ. ಎಲ್ಲವೂ ಸೋಮವಾರ ಬಹಿರಂಗ ವಾಗಲಿದೆ ಎಂದಿದ್ದಾರೆ. ಇದೇ ವೇಳೆ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಮುಂದಿಟ್ಟ ಬೇಡಿಕೆಗೆ ಕಾಂಗ್ರೆಸ್ ಒಪ್ಪಿದೆಯೋ ಇಲ್ಲವೋ ಎಂದು ಗೊತ್ತಾಗಿಲ್ಲ.
77 ಅಭ್ಯರ್ಥಿಗಳ ಪೈಕಿ ಪಟೇಲ್ ಸಮುದಾಯದ 25 ಮಂದಿಗೆ ಕೈ ಟಿಕೆಟ್
ಇನ್ನು ಪ್ರಸ್ತುತ ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಒಟ್ಟು 77 ಮಂದಿಯ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪೈಕಿ 25 ಮಂದಿ ಪಟೇಲ್ ಸಮುದಾಯದ ನಾಯಕರಾಗಿದ್ದಾರೆ. ಈ ಪೈಕಿ ಲಲಿತ್ ವಸೋಯ. ಅಮಿತ್ ತುಮ್ಮರ್ ಸೇರಿ ಒಟ್ಟು 25 ಪಾಟಿದಾರ್ ಸದಸ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದೇ ಅಂಶ ಇದೀಗ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.