ದೇಶ

ಸೆನ್ಸಾರ್ ಗೂ ಮೊದಲೇ ರಾಜ್ಯಗಳು 'ಪದ್ಮಾವತಿ'ಗೆ ನಿಷೇಧ ಹೇರುವಂತಿಲ್ಲ: ಪಹ್ಲಾಜ್ ನಿಹಲಾನಿ

Srinivasamurthy VN
ನವದೆಹಲಿ: ಪದ್ಮಾವತಿ ಚಿತ್ರದ ಸೆನ್ಸಾರ್ ಕಾರ್ಯ ಪೂರ್ಣಗೊಳ್ಳುವವರೆಗೂ ಯಾವುದೇ ರಾಜ್ಯ ಅಥವಾ ರಾಜ್ಯ ಸರ್ಕಾರ ಚಿತ್ರಕ್ಕೆ ನಿಷೇಧ ಹೇರುವಂತಿಲ್ಲ ಎಂದು ಮಾಜಿ ಸೆನ್ಸಾರ್ ಮಂಡಳಿ (ಸಿಬಿಎಫ್ ಸಿ) ಅಧ್ಯಕ್ಷ ಪೆಹ್ಲಾಜ್  ನಿಹಲಾನಿ ಹೇಳಿದ್ದಾರೆ.
ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರ ವಿವಾದ ಸಂಬಂಧ ಮಾತನಾಡಿರುವ ನಿಹಲಾನಿ ಅವರು, ಯಾವುದೇ ರಾಜ್ಯದಲ್ಲಾಗಲಿ ಅಥವಾ ಯಾವುದೇ ರಾಜ್ಯ ಸರ್ಕಾರವಾಗಲಿ, ಸೆನ್ಸಾರ್  ಮಂಡಳಿಯಿಂದ ಪ್ರಮಾಣ ಪತ್ರ ದೊರೆಯುವ ವರೆಗೂ ಚಿತ್ರದ ನಿಷೇಧದ ಕುರಿತು ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.
ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ಸರ್ಕಾರ ಪದ್ಮಾವತಿ ಚಿತ್ರಕ್ಕೆ ನಿಷೇಧ ಹೇರಿರುವ ವಿಚಾರವನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದ ನಿಹಲಾನಿ ಅವರು, ಯಾವುದೇ ಚಿತ್ರವನ್ನು ಯಾವುದೇ ಸರ್ಕಾರ  ಸೆನ್ಸಾರ್ ಗೂ ಅಥವಾ ಪ್ರಮಾಣಪತ್ರ ನೀಡುವಿಕೆಗೂ ಮುನ್ನ ನಿಷೇಧಿಸುವಂತಿಲ್ಲ. ಪ್ರಮಾಣ ಪತ್ರದೊರೆತ ಬಳಿಕ ಚಿತ್ರದಲ್ಲಿರುವ ಸನ್ನಿವೇಶಗಳು ಯಾವುದಾದರೂ ಸಮುದಾಯದ ಅಥವಾ ಧರ್ಮದ ಅಥವಾ ಜಾತಿಯ  ಭಾವನೆಗಳಿಗೆ ಧಕ್ಕೆಯಾಗುವಂತಿದ್ದರೆ ಅಥವಾ ಚಿತ್ರದಿಂದ ಸಂಘರ್ಷಕ್ಕೆ ಕಾರಣವಾಗುವಂತಿದ್ದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಿದ್ದರೆ ಮಾತ್ರ ಅಂತಹ ಕ್ರಮಕ್ಕೆ ಮುಂದಾಗಬಹುದು ಅದೂ ಕೂಡ ಸೆನ್ಸಾರ್  ಮಂಡಳಿಯಿಂದ ಪ್ರಮಾಣ ಪತ್ರ ದೊರೆತ ಬಳಿಕವಷ್ಟೇ ಎಂದು ಹೇಳಿದ್ದಾರೆ.
ಒಂದು ವೇಳೆ ಯಾವುದೇ ರಾಜ್ಯ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದ್ದರೆ ಚಿತ್ರ ತಂಡ ಅಥವಾ ಚಿತ್ರ ನಿರ್ಮಾಪಕ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲಯದ ಮೊರೆ ಹೋಗಬಹುದು. ವಿವಾದಿತ ಸನ್ನಿವೇಶಗಳಿಗೆ ಸೆನ್ಸಾರ್  ಮಂಡಳಿ ಕತ್ತರಿಹಾಕಿದ ಬಳಿಕವೂ ರಾಜ್ಯ ಸರ್ಕಾರ ಚಿತ್ರಕ್ಕೆ ನಿಷೇಧ ಹೇರುವಂತಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ಪರೋಕ್ಷವಾಗಿ ಚಿತ್ರತಂಡದೆ ಬೆನ್ನಿಗೆ ನಿಂತ ನಿಹಲಾನಿ, ಚಿತ್ರ ಮಾಡುವುದೇ ದೊಡ್ಡ ಅಪರಾಧವೇನು?  ಚಿತ್ರತಂಡಕ್ಕೆ ಏಕೆ ಶಿಕ್ಷೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.
SCROLL FOR NEXT