ದೇಶ

ಮಲೆಯಾಳಂ ನಟಿ ಲೈಂಗಿಕ ದೌರ್ಜನ್ಯ ಪ್ರಕರಣ: ನಟ ದಿಲೀಪ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎಸ್ಐಟಿ

Lingaraj Badiger
ಕೊಚ್ಚಿ: ದಕ್ಷಿಣ ಭಾರತದ ಖ್ಯಾತ ಮಲೆಯಾಳಂ ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಬುಧವಾರ ಮಲೆಯಾಳಂ ನಟ ದಿಲೀಪ್ ಅವರ ವಿರುದ್ಧ ಅಧೀನ ನ್ಯಾಯಾಲಯಕ್ಕೆ ಪೂರಕ ಚಾರ್ಜ್ ಶೀಟ್ ಸಲ್ಲಿಸಿದ್ದು, ನಟನನ್ನು ಎಂಟನೇ ಆರೋಪಿಯನ್ನಾಗಿ ಮಾಡಿದೆ.
ನಟಿ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಅಲಿಯಾಸ್ ಸುನಿಲ್ ಕುಮಾರ್ ನನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದ್ದು, ದಿಲೀಪ್ ಕಾಲ್ ಮಾಡಲು ಪಲ್ಸರ್ ಸುನಿಗೆ ಮೊಬೈಲ್ ನೀಡಿದ್ದ ಸಿವಿಲ್ ಪೊಲೀಸ್ ಅಧಿಕಾರಿ ಅನಿಶ್ ಮತ್ತು ಸುನಿಗೆ ಸಹಾಯ ಮಾಡಿದ ವಿಪಿನ್ ಲಾಲ್ ಅವರನ್ನು ಇತರೆ ಆರೋಪಿಗಳನ್ನಾಗಿ ಮಾಡಲಾಗಿದೆ.
ತನಿಖಾ ಅಧಿಕಾರಿ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಬೈಜು ಪೊಲೊಸ್ ಅವರು ಇಂದು ಅಂಗಮಲ್ಯ ಕೋರ್ಟ್ ಗೆ ನಟ ದಿಲೀಪ್ ಸೇರಿದಂತೆ 14 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ಅದರಲ್ಲಿ 385 ಸಾಕ್ಷಿಗಳು ಮತ್ತು 12 ಗೌಪ್ಯ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಈ ಪೈಕಿ ಚಿತ್ರೋದ್ಯಮದ 50 ಸಾಕ್ಷಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಗಮಲ್ಯ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ದಿಲೀಪ್ ಅವರ ಮಾಜಿ ಪತ್ನಿ ಮಂಜು ವಾರಿಯರ್ ಅವರನ್ನು 11ನೇ ಸಾಕ್ಷಿಯನ್ನಾಗಿ ಮಾಡಲಾಗಿದೆ.
ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಮುಖ ಆರೋಪಿ ಪಲ್ಸರ್ ಸುನಿಯನ್ನು ಫೆ.23ರಂದು ಪೊಲೀಸರು ಬಂಧಿಸಿದ್ದರು. ಇದೇ ಪ್ರಕರಣ ಸಂಬಂಧ ನಟ ದಿಲೀಪ್ ಅವರನ್ನು ಸಹ ಕಳೆದ ಜುಲೈ10 ರಂದು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. 
ಪ್ರಕರಣ ಸಂಬಂಧ ಸುನೀಲ್ ಸೇರಿದಂತೆ ಇನ್ನಿತರೆ ಆರೋಪಿಗಳ ವಿರುದ್ಧ ಕೇರಳ ಪೊಲೀಸರು ಐಪಿಸಿ ಸೆಕ್ಸನ್ 342 (ಅಕ್ರಮ ಬಂಧನ), 366 (ಅಪಹರಣ ಅಥವಾ ಮಹಿಳೆಯ ಅಪಹರಣ), 376 (ಅತ್ಯಾಚಾರ, 506 (1) ಮತ್ತು 120 (ಬಿ) (ವಂಚನೆ)) ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ.
SCROLL FOR NEXT