ಕೋಲ್ಕತ್ತಾ: ಕೋಲ್ಕತಾ ಮಹಾನಗರ ಪಾಲಿಕೆ (ಕೆಎಂಸಿ) ಇಂದು ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿಯವರ ಮನೆಯಲ್ಲಿ ಡೆಂಗ್ಯೂ ಗೆ ಕಾರಣವಾಗಬಲ್ಲ ಸೊಳ್ಳೆಗಳು ಪತ್ತೆಯಾಗಿರುವುದಕ್ಕೆ ನೋಟೀಸ್ ಜಾರಿ ಮಾಡಿದೆ. ಮಾಜಿ ರಣಜಿ ಟ್ರೋಫಿ ಆಟಗಾರನಾಗಿರುವ ಗಂಗೂಲಿಯ ಹಿರಿಯ ಸಹೋದರ ಸ್ನೇಹಶಿಶ್ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ನಗರದ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
"ನವೆಂಬರ್ 19 ರಂದು ನಾವು ತಪಾಸಣೆ ನಡೆಸಿದ ಸಮಯದಲ್ಲಿ ಕೋಲ್ಕತ್ತಾದ ಬೆಹಾಲಾ ದಲ್ಲಿನ ಗಂಗೂಲಿ ನಿವಾಸದಲ್ಲಿ ಡೆಂಗ್ಯೂ ಸೊಳ್ಳೆಗಳ ಲಾರ್ವಾವನ್ನು ಪತ್ತೆಹಚ್ಚಿದ್ದೇವೆ ಮತ್ತು ಮನೆಯ ಸುತ್ತ ಮುತ್ತಲಿನ ಸ್ಥಳವನ್ನು ಸ್ವಚ್ಚವಾಗಿರಿಸಿಕೊಳ್ಳಲು ನಾವು ಅವರಿಗೆ ಹೇಳಿದ್ದೇವೆ" ಕೆಎಂಸಿ ಸದಸ್ಯ, ಮೇಯರ್ ಇನ್-ಕೌನ್ಸಿಲ್ (ಆರೋಗ್ಯ), ಅತಿನ್ ಘೋಷ್ ಪಿಟಿಐ ಗೆ ತಿಳಿಸಿದರು.
"ಆದರೆ ಇಂದೂ ಸಹ ಅವರ ಮನೆಯ ದೊಡ್ಡ ಕಂಪೌಂಡ್ ನಲ್ಲಿ ಸೊಳ್ಳೆಗಳ ಲಾರ್ವಾ ಪತ್ತೆಯಾಗಿದೆ. ಹೀಗಾಗಿ ನಾವು ನಿಯಮಾನುಸಾರ ಅವರಿಗೆ ನೋಟೀಸ್ ಜಾರಿ ಮಾಡಿದ್ದೇವೆ ಎಂದು ಘೋಷ್ ಹೇಳಿದ್ದಾರೆ.
"ಗಂಗೂಲಿಯವರ ಹಿರಿಯ ಸೋದರ ನಿನ್ನೆ ಸಂಜೆ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದು, ಡೆಂಗ್ಯೂ ಪರೀಕ್ಷೆಗೆ ಒಳಪಟ್ಟಿದ್ದಾರೆ. ಅವರಿಗೆ ಡೆಂಗ್ಯೂ ಇರುವುದು ದೃಢಪಟ್ಟಿದೆ." ಎಂದು ಸಿಟಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಹೇಳಿದರು. "ಇದೀಗ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ" ಅವರು ಹೇಳಿದರು.
ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆ ಮಾಹಿತಿಯಂತೆ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 35 ಮಂದಿ ಡೆಂಗ್ಯೂ ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನು ಅನಧಿಕೃತ ದಾಖಲೆಯ ಪ್ರಕಾರ ಇದುವರೆಗೆ ಐವತ್ತು ಜನ ಇದರಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics