ಮುಂಬೈ: 26/11 2008ರ ಮುಂಬೈ ಮೇಲಿನ ಉಗ್ರರ ದಾಳಿ ನಡೆದು 9 ವರ್ಷ ಕಳೆದಿದ್ದು, ಅಮಾಯಕ ಜನರು, ಹುತಾತ್ಮ ಯೋಧರನ್ನು ಕಳೆದುಕೊಂಡ ಕರಾಳ ದಿನವನ್ನು ದೇಶದ ಜನತೆ ನೆನೆಯುತ್ತಿದೆ.
ಉಗ್ರರ ದಾಳಿಯ ಕರಾಳ ದಿನಗಳು ಮತ್ತೆಂದು ಮರುಕಳಿಸದಂತೆ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು, ಕರಾಳ ದಿನ ಹಿನ್ನಲೆಯಲ್ಲಿ ಮುಂಬೈ ನಗರದಾದ್ಯಂತ ಭಾರೀ ಕಟ್ಟೆಚ್ಚರವನ್ನು ವಹಿಸಿದ್ದಾರೆ. ಮುಂಬೈ ನಗರದಾದ್ಯಂತ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿರುವ ಸರ್ಕಾರ, ನಗರವನ್ನು ಪ್ರವೇಶಿಸುವ ಪ್ರತೀಯೊಂದು ವಾಹನವನ್ನೂ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ನಗರದಾದ್ಯಂತ ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು, ಪ್ರತೀಯೊಂದು ಜಂಕ್ಷನ್ ನಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಇನ್ಸ್'ಪೆಕ್ಟರ್ ನುತನ್ ಪವಾರ್ ಅವರು ಹೇಳಿದ್ದಾರೆ.
ಅನುಮಾನಾಸ್ಪದವಾಗಿ ಯಾವುದೇ ವಾಹನಗಳು ಅಥವಾ ವ್ಯಕ್ತಿಗಳು ಕಂಡುಬಂದರೂ ಕೂಡಲೇ ಅವರನ್ನು ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರಾಳ ದಿನ ಹಿನ್ನಲೆಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲು ನಗರದ ಹಲವೆಡೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಕಗ್ಗತ್ತಲಲ್ಲಿ ಸಮುದ್ರ ಮಾರ್ಗದ ಮೂಲಗ ಮುಂಬೈ ನಗರಕ್ಕೆ ಲಗ್ಗೆಯಿಟ್ಟಿದ್ದ ಪಾಕಿಸ್ತಾನ ಮೂಲಕ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕರು ನೆತ್ತರು ಹರಿಸಿದ್ದರು. ತಾಜ್ ಹೋಟೆಲ್ ನಲ್ಲಿದ್ದ ಜನರನ್ನು 3 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಉಗ್ರರು ಅಟ್ಟಹಾಸ ಮೆರೆದಿದ್ದರು. ಭಾರತದ ಇತಿಹಾಸದಲ್ಲಿಯೇ ಎಂದೂ ಕಂಡಿರದಂತಹ ರೀತಿಯಲ್ಲಿ ದಾಳಿ ನಡೆಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಲ್, ಲಿಯೋಪೋಲ್ಡ್ ಕೆಫೆ, ಕಾಮಾ ಆಸ್ಪತ್ರೆ ಸೇರಿದಂತೆ ಒಟ್ಟು 7 ಕಡೆಗಳಲ್ಲಿ ಉಗ್ರರು ದಾಳಿ ನಡೆಸಿ 166 ಅಮಾಯಕ ಜನರನ್ನು ಬಲಿಪಡೆದುಕೊಂಡಿದ್ದರು.
ಸುಮಾರು 10 ಉಗ್ರರು ಮುಂಬೈ ಮೇಲೆ ದಾಳಿ ನಡೆಸಿದ್ದರು. 68 ಗಂಟೆಗಳ ಕಾಲ ಭದ್ರತಾ ಸಿಬ್ಬಂದಿಗಳು ಉಗ್ರರೊಡನೆ ಹೋರಾಟ ನಡೆಸಿದ್ದರು. ಉಗ್ರರ ವಿರುದ್ಧ ಹೋರಾಟದಲ್ಲಿ 17 ಜನ ಭಧ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದರು.
ಈ ಕರಾಳ ದಿನಕ್ಕೆ ಇಂದಿಗೆ 9 ವರ್ಷಗಳು ಕಳೆದಿದ್ದು, ದಾಳಿಯಲ್ಲಿ ಅಸುನೀಗಿದವರಿಗೆ ದೇಶದ ಜನತೆ ಶ್ರದ್ಧಾಂಜಲಿ ಸಲ್ಲಿಸತ್ತಿದ್ದಾರೆ. ಮತ್ತೊಂದೆಗೆ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ರಾಜನಂತೆ ಓಡಾಡಿಕೊಂಡು ಇದ್ದಾನೆ. 3 ದಿನಗಳ ಹಿಂದಷ್ಟೇ ಹಫೀಜ್ ಸಯೀದ್ ಗೃಹ ಬಂಧನದಿಂದ ಬಿಡುಗಡೆಯಾಗಿದ್ದು, ಈ ಮೂಲಕ ಮುಂಬೈ ದಾಳಿ ವಿಚಾರದಲ್ಲಿ ಭಾರತಕ್ಕೆ ಭಾರೀ ಹಿನ್ನಡೆಯಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos