ಲಕ್ನೋ: ದೇಶದ ಹಲವೆಡೆ ಆಗಾಗ ವಿಲಕ್ಷಣ ಸುದ್ದಿಗಳನ್ನು ಕೇಳುತ್ತೇವೆ. ಇಂತಹ ಘಟನೆಯೊಂದು ಉತ್ತರ ಪ್ರದೇಶದ ಒರೈಯ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ಈ ಜೈಲಿನಲ್ಲಿ 8 ಕತ್ತೆಗಳನ್ನು ಸೆರೆಯಲ್ಲಿಡಲಾಗಿತ್ತು. ನಂತರ ಸ್ಥಳೀಯ ಬಿಜೆಪಿ ಮುಖಂಡರ ಶಿಫಾರಸಿನ ಮೇರೆಗೆ ಕತ್ತೆಗಳನ್ನು ಬಿಡುಗಡೆ ಮಾಡಲಾಯಿತು.
ಈ ಕತ್ತೆಗಳನ್ನು ಜೈಲಿನ ಕೋಣೆಗೆ ಕಳುಹಿಸಿದ್ದು ಅಲ್ಲಿನ ಮೇಲ್ವಿಚಾರಕ ಸೀತಾ ರಾಮ್ ಶರ್ಮ. ಜೈಲಿನ ಆವರಣದಲ್ಲಿ ನೆಡಲೆಂದು ಜೈಲಿನ ಅಧಿಕಾರಿಗಳು ದುಬಾರಿ ಗಿಡಗಳನ್ನು ತಂದು ಹೊರಗಿಟ್ಟಿದ್ದರಂತೆ. ಅಲ್ಲಿಗೆ ಮೇಯಲು ಬಂದ ಕತ್ತೆಗಳು ಅವನ್ನು ತಿಂದು ಹಾಳು ಮಾಡಿದವು. ಆ ಸಿಟ್ಟಿನಲ್ಲಿ ಕತ್ತೆಗಳನ್ನು ಜೈಲಿನ ಕೋಣೆಯೊಳಗೆ ಕೂಡಿ ಹಾಕಿದರು.
ಕತ್ತೆಗಳ ಮಾಲಿಕ ಬಂದು ಎಷ್ಟು ಗೋಗರೆದರೂ ಕೂಡ ಜೈಲಿನ ಅಧಿಕಾರಿಗಳು ಬಿಡಲಿಲ್ಲ. ಕೊನೆಗೆ ಮಾಲಿಕ ಅಲ್ಲಿನ ಬಿಜೆಪಿ ನಾಯಕ ಶಕ್ತಿ ಗಗೊಯ್ ಅವರ ಮೊರೆ ಹೋದರು. ಆಗ ಶಕ್ತಿ ಗೊಗಯ್ ಜೈಲಿಗೆ ಹೋಗಿ ಕತ್ತೆಗಳನ್ನು ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರಂತೆ.
ಕತ್ತೆಗಳಿಗೆ ಜೈಲಿಂದ ಹೊರಬರುವ ಭಾಗ್ಯ ಸಿಕ್ಕಿತು. ಇಲ್ಲದಿದ್ದರೆ ಅಲ್ಲಿಯೇ ಕೊಳೆಯಬೇಕಾಗಿತ್ತೋ ಏನೋ?
ಸಾಮಾನ್ಯವಾಗಿ ಜೈಲಿಗೆ ಹೋಗುವುದು, ಅಲ್ಲಿಂದ ಬಿಡುಗಡೆಯಾಗಿ ಹೊರ ಬರುವುದು ಮನುಷ್ಯರು. ಆದರೆ ಇಲ್ಲಿ ಈ ಬಾರಿ ಕತ್ತೆಗಳು ಜೈಲಿನ ಕೋಣೆಯಿಂದ ಬಿಡುಗಡೆಯಾಗಿ ಹೊರಬರುವುದನ್ನು ಸ್ಥಳೀಯರು ಕುತೂಹಲದಿಂದ ನೋಡುತ್ತಿದ್ದರಂತೆ.