ದೇಶ

ಶಬರಿಮಲೆ ಮೇಲೂ ಇಸಿಸ್ ಕೆಂಗಣ್ಣು: ವಿಷಾಹಾರ ಮೂಲಕ ದಾಳಿ ಸಾಧ್ಯತೆ

Srinivasamurthy VN
ತಿರುವನಂತಪುರಂ‌: ಶಬರಿಮಲೆಗೆ ತೆರಳುವ ಅಯ್ಯಪ್ಪ ವ್ರತಧಾರಿಗಳ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರು ಕೆಂಗಣ್ಣು ಬೀರಿದ್ದು, ವಿಷಾಹಾರಗಳ ಮೂಲಕ ಅಯ್ಯಪ್ಪ ಭಕ್ತರ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದಾರೆ ಎಂದು  ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಇಸಿಸ್ ಉಗ್ರ ಸಂಘಟನೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಸಂದೇಶಗಳ ಹರಿದಾಡುತ್ತಿದ್ದು, ವಿಚಾರ ತಿಳಿಯುತ್ತಿದ್ದಂತೆಯೇ ಕೇರಳದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಂತೆಯೇ ಸಾಮಾಜಿಕ  ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆದರಿಕೆ ಸಂದೇಶಗಳ ನಿಖರತೆ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ’ ಎಂದು ಕೇರಳ ಪೊಲೀಸ್‌ ಮಹಾನಿರ್ದೇಶಕ ಲೋಕನಾಥ್ ಬೆಹ್ರಾ ಹೇಳಿದ್ದಾರೆ.
ಇನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ತ್ರಿಶೂರ್‌ ರೈಲು ನಿಲ್ದಾಣದಲ್ಲಿ ಭದ್ರತೆ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಪೊಲೀಸರು ಸೂಚಿಸಿದ್ದಾರೆ. ರೈಲಿನಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ  ಶಬರಿಮಲೆ ಯಾತ್ರಿಕರ ಕುಡಿಯುವ ನೀರಿಗೆ ಹಾಗೂ ಆಹಾರಕ್ಕೆ ವಿಷ ಬೆರೆಸುವ ಸಾಧ್ಯತೆ ಕುರಿತು ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ರೈಲ್ವೆ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌, ತ್ರಿಶೂರು ರೈಲು ನಿಲ್ದಾಣದ ಮ್ಯಾನೇಜರ್‌  ಗೆ ಪತ್ರ ಬರೆದು ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.
ಇದೇ ಕಾರಣಕ್ಕೆ ತ್ರಿಶೂರ್ ರೈಲು ನಿಲ್ದಾಣ ಸೇರಿದಂತೆ ಶಬರಿಮಲೆ ಸಂಪರ್ಕಿಸುವ ವಿವಿಧ ರೈಲು ನಿಲ್ದಾಣಗಳಲ್ಲೂ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಶಬರಿಮಲೆ ಧ್ವಜಸ್ತಂಭದ ಬಳಿ ಕೆಲ ಕಿಡಿಕೇಡಿಗಳು ಪಾದರಸ ಎರಚುವ ಮೂಲಕ ಧ್ವಜಸ್ತಂಭಕ್ಕೆ ಹಾನಿ ಮಾಡಲು ಯತ್ನಿಸಿದ್ದರು ಎಂದು ಹೇಳಲಾಗಿತ್ತು. ಈ ಪ್ರಕರಣದ ಬೆನ್ನಲ್ಲೇ ಇಸ್ಲಾಮಿಕ್ ಸ್ಟೇಟ್ ಉಗ್ರರ ಕೆಂಗಣ್ಣು  ಅಯ್ಯಪ್ಪ ಮಾಲಾಧಾರಿಗಳ ಮೇಲೆ ಬಿದ್ದಿದೆ ಎನ್ನಲಾಗುತ್ತಿದೆ.
SCROLL FOR NEXT