ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಸಿಂಗಾಪುರ ರಕ್ಷಣಾ ಸಚಿವ
ಕೋಲ್ಕತಾ: ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ಅತ್ಯುತ್ತಮವಾಗಿದೆ ಎಂದು ಸಿಂಗಾಪುರ ರಕ್ಷಣಾ ಸಚಿವ ಡಾ.ಎನ್ ಜಿ ಇಂಗ್ ಹೆನ್ ಹೇಳಿದ್ದಾರೆ.
ಮಿಲಿಟರ್ ತರಬೇತಿ ಕಾರ್ಯಕ್ರಮ ನಿಮಿತ್ತ ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಹೆನ್, ಇಂದು ಪಶ್ಚಿಮ ಬಂಗಾಳದ ಕಲೈಕುಂಡ ವಾಯುನೆಲೆಯಲ್ಲಿ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದಲ್ಲಿ ಕೆಲ ಹೊತ್ತು ಹಾರಾಟ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆನ್ ತೇಜಸ್ ಯುದ್ಧ ವಿಮಾನ ಅತ್ಯುತ್ತಮವಾಗಿದೆ. ನನ್ನ ಮಟ್ಟಿಗೆ ಹೇಳುವುದಾದರೆ ತೇಜಸ್ ಯುದ್ಧ ವಿಮಾನ ಆಕರ್ಷಕ ಮತ್ತು ಅತ್ಯುತ್ತಮವಾಗಿದೆ ಎಂದು ಹೇಳಿದರು.
"ಸ್ವದೇಶೀಯವಾಗಿ ವಿನ್ಯಾಸಗೊಳಿಸಿರುವ ತೇಜಸ್ ಯುದ್ದ ವಿಮಾನದಲ್ಲಿ ಹಾರಾಟ ನಡೆಸಲು ನನಗೆ ಅವಕಾಶ ದೊರೆತಿದ್ದು, ನನಗೆ ಸಿಕ್ಕ ಗೌರವವಾಗಿದೆ. ತೇಜಸ್ ಯುದ್ದ ವಿಮಾನ ಅತ್ಯುತ್ತಮವಾಗಿದ್ದು, ಯುದ್ಧ ವಿಮಾನದಲ್ಲಿ ನನಗೆ ಐಶಾರಾಮಿ ಕಾರಿನಲ್ಲಿ ತೆರಳುತ್ತಿದ್ದ ಅನುಭವವಾಯಿತು. ಇದಕ್ಕಾಗಿ ಮಿಮಾನ ಚಲಾಯಿಸಿದ ಏರ್ ವೈಸ್ ಮಾರ್ಷಲ್ ಎಪಿ ಸಿಂಗ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಇದೇ ವೇಳೆ ಸಿಂಗಾಪುರ ತೇಜಸ್ ಯುದ್ಧ ವಿಮಾನವನ್ನು ಖರೀದಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನೇನು ವೃತ್ತಿಪರ ಪೈಲಟ್ ಅಥವಾ ರಕ್ಷಣಾ ತಜ್ಞನಲ್ಲ.. ಈ ಬಗ್ಗೆ ತಜ್ಞರು ಮತ್ತು ಅಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಇನ್ನು ಸೇನಾ ಮೂಲಗಳು ತಿಳಿಸಿರುವಂತೆ ಸಿಂಗಾಪುರ ದೇಶ ತೇಜಸ್ ಯುದ್ಧ ವಿಮಾನವನ್ನು ಖರೀದಿಸಲು ಆಸಕ್ತಿ ತೋರಿಸಿದ್ದು, ಇದೇ ಕಾರಣಕ್ಕೆ ಆ ದೇಶದ ರಕ್ಷಣಾ ಸಚಿವ ಹೆನ್ ಅವರು ಭಾರತಕ್ಕೆ ಆಗಮಿಸಿದ್ದಾರೆ. ಅಲ್ಲದೆ ಹೆನ್ ಅವರು ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.