ಅಹಮದಾಬಾದ್: ನಾನು ಸೇರಿದಂತೆ ಭಾರತದಲ್ಲಿ ಪ್ರತಿಯೊಬ್ಬ ಮಹಿಳೆಯೂ ಒಂದಲ್ಲಾ ಒಂದು ಸಂದರ್ಭದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುತ್ತಾರೆ ಎಂದು ಮುಂಬೈ ಉತ್ತರ ಬಿಜೆಪಿ ಸಂಸದೆ ಪೂನಂ ಮಹಾಜನ್ ಅವರು ಹೇಳಿದ್ದಾರೆ.
ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪೂನಂ ಮಹಾಜನ್, ನಾನು ಸಹ ಕಾಲೇಜ್ ಗೆ ಹೋಗುತ್ತಿದ್ದಾಗ ರೈಲಿನಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ್ದೆ. ನನಗಾಗ ಕಾರಿನಲ್ಲಿ ಹೋಗಲು ಹಣವಿರಲಿಲ್ಲ. ಆದರೆ ರೈಲಿನಲ್ಲಿ ಹೋಗುವಾಗ ಕೆಲವರ ನೋಟ ವಿಚಿತ್ರವಾಗಿರುತ್ತಿತ್ತು. ಅಸಭ್ಯ ರೀತಿಯಲ್ಲಿ ಮೈ ಕೈ ತಾಗಿಸಿಕೊಂಡು ಹೋಗುತ್ತಾರೆ. ಇನ್ನು ಕೆಲವರು ಬೇಕಂತಲೇ ಮೈ ಮುಟ್ಟಿ ಮಾತನಾಡುತ್ತಾರೆ. ಅಂಥ ಅನುಭವವನ್ನು ಭಾರತದಲ್ಲಿ ಪ್ರತಿಯೊಬ್ಬ ಮಹಿಳೆಯೂ ಅನುಭವಿಸಿಯೇ ಇರುತ್ತಾಳೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ದಿ ಗ್ಲಾಸ್ ಸೀಲಿಂಗ್ ವಿಷಯದ ಕುರಿತು ಮಾತನಾಡಿದ ಮಹಾಜನ್, ಕೆಲವೊಂದು ವಿಷಯದಲ್ಲಿ ನಾವು ಅಮೆರಿಕಕ್ಕಿಂತಲೂ ಮುಂದಿದ್ದೇವೆ. ನಮ್ಮ ದೇಶದಲ್ಲಿ ಎಲ್ಲ ಸ್ತರಗಳಲ್ಲೂ ಮಹಿಳೆಯರೂ ತಮ್ಮ ಛಾಪು ಮೂಡಿಸಿದ್ದಾರೆ. ಅಮೆರಿಕದಲ್ಲಿ ಇದುವರೆಗೂ ಮಹಿಳಾ ಅಧ್ಯಕ್ಷರಾಗಿಲ್ಲ. ಆದರೆ ಭಾರತದಲ್ಲಿ ಮಹಿಳೆಯರು ರಾಷ್ಟ್ರಪತಿ, ಪ್ರಧಾನಿ, ರಕ್ಷಣಾ ಸಚಿವರು ಹಾಗೂ ಮುಖ್ಯಮಂತ್ರಿಗಳಾಗಿದ್ದಾರೆ. ಈ ಮೂಲಕ ಎಲ್ಲದರಲ್ಲೂ ನಾವು ಸಮರ್ಥರು ಎಂದು ತೋರಿಸಿದ್ದಾರೆ ಎಂದರು.
ಇನ್ನು ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಮಹಿಳೆಯರು ಅಯ್ಯೋ... ಹೀಗಾಯ್ತಲ್ಲಾ ಅಂತ ಕೊರಗುವ ಬದಲು ಕಾಮುಕರ ಕೆನ್ನೆಗೆ ಬಾರಿಸಬೇಕು ಮತ್ತು ನಂತರ ಆ ಬಗ್ಗೆ ಯೋಚಿಸಬಾರದು ಎಂದು ಸಂಸದೆ ಸಲಹೆ ನೀಡಿದ್ದಾರೆ.