ರಾಜರಾಜೇಶ್ವರ ದೇಗುಲದಲ್ಲಿ ಅಮಿತ್ ಷಾ ಪ್ರಾರ್ಥನೆ ಸಲ್ಲಿಸುತ್ತಿರುವುದು
ತಿರುವನಂತಪುರ: ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿರುವ ಸಿಪಿಐ(ಎಂ) ವಿರುದ್ಧ ನಾಳೆಯಿಂದ ಎರಡು ವಾರಗಳ ಕಾಲ ದೇಶದ ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ಪಾದ ಯಾತ್ರೆ ಮಾಡುವುದಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ಘೋಷಿಸಿದ್ದಾರೆ.
ಇಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತವರು ಜಿಲ್ಲೆ ಕಣ್ಣೂರಿನ ಪಯ್ಯನ್ನೂರಿನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾ, ಸಿಪಿಎಂ ಸರ್ಕಾರ ‘ಹತ್ಯೆ ರಾಜಕೀಯ’ ನಡೆಸುತ್ತಿದೆ ಎಂದು ಆರೋಪಿಸಿದರು. ಅಲ್ಲದೆ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಹಿಂಸಾಚಾರ ಘಟನೆಗಳಿಗೆ ವಿಜಯನ್ ಅವರೇ ಹೊಣೆ ಎಂದರು.
ಎಡರಂಗದ ರಾಜಕೀಯ ಹಿಂಸಾಚಾರ ಖಂಡಿಸಿ ಬಿಜೆಪಿಯ ‘ಜನ ರಕ್ಷಾ ಯಾತ್ರೆ’ಗೆ ಅಮಿತ್ ಶಾ ಚಾಲನೆ ನೀಡಿದರು. ಇದಕ್ಕೂ ಮುನ್ನ, ಉತ್ತರ ಕಣ್ಣೂರಿನ ರಾಜರಾಜೇಶ್ವರ ದೇಗುಲಕ್ಕೆ ಭೇಟಿ ನೀಡಿದ ಅಮಿತ್ ಷಾ ಪ್ರಾರ್ಥನೆ ಸಲ್ಲಿಸಿದರು.
ರಾಜಧಾನಿ ತಿರುವನಂತಪುರಕ್ಕೆ ಹಮ್ಮಿಕೊಳ್ಳಲಾಗಿರುವ, ಸುಮಾರು 15 ದಿನಗಳ ಕಾಲ ನಡೆಯಲಿರುವ ಜನ ರಕ್ಷಾ ಯಾತ್ರೆ’ಯಾತ್ರೆಯಲ್ಲಿ ಬಿಜೆಪಿಯ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಯಾತ್ರೆಯಲ್ಲಿ ಭಾಗವಹಿಸುವ ಸಲುವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಕಣ್ಣೂರಿಗೆ ತೆರಳಲಿದ್ದಾರೆ.