ಅಮೇಥಿ: ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಮತ್ತು ಯುವಕರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ಅದನ್ನು ಬಹಿರಂಗವಾಗಿ ಹೇಳಲಿ. ಕಾಂಗ್ರೆಸ್ ಪಕ್ಷ ಕೇವಲ ಆರು ತಿಂಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧವಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಹೇಳಿದ್ದಾರೆ.
ಇಂದು ತಮ್ಮ ಸ್ವಕ್ಷೇತ್ರ ಅಮೆಥಿಯಲ್ಲಿ ರೈತರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಯುಪಿಎ ಸರ್ಕಾರ ಜಾರಿಗೆ ತಂದ ನರೇಗಾ ಯೋಜನೆಯನ್ನು ಪ್ರಧಾನಿ ಮೋದಿ ವಿರೋದಿಸಿದ್ದರು. ಅದೊಂದು ಅಪ್ರಯೋಜಕ ಯೋಜನೆ ಎಂದು ಟೀಕಿಸಿದ್ದರು. ಕೆಲ ತಿಂಗಳುಗಳ ನಂತರ ನರೇಗಾ ಯೋಜನೆ ಅತ್ಯುಪಯುಕ್ತ ಎಂದು ಹೇಳುತ್ತಿರುವುದಾಗಿ ಲೇವಡಿ ಮಾಡಿದರು.
ಕಾಂಗ್ರೆಸ್ ನೇತೃತ್ವದ ಸರಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜನತೆಯ ಅಭಿಪ್ರಾಯಪಡೆದು ನಂತರ ತೀರ್ಮಾನ ತೆಗೆದುಕೊಳ್ಳುತ್ತಿತ್ತು. ಆದರೆ, ಬಿಜೆಪಿ ಯಾವುದೇ ಸಮಸ್ಯೆಯ ಬಗ್ಗೆ ತನ್ನದೇ ಆದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನೇ ಮರುನಾಮಕರಣ ಮಾಡಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಜಾರಿಗೆ ತರುತ್ತಿದೆ. ಜಿಎಸ್ ಟಿ ಸಹ ಕಾಂಗ್ರೆಸ್ ನ ಯೋಜನೆ. ಆದರೆ ಮೋದಿ ಸರ್ಕಾರ ಅದನ್ನು ಸರಿಯಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದ್ದರಿಂದ ಸಣ್ಣ ವ್ಯಾಪಾರಿಗಳಿಗೆ ದೊಡ್ಡ ಸಮಸ್ಯೆಯಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲೂ ಸಂಪೂರ್ಣ ವಿಫಲವಾಗಿದೆ ಎಂದು ರಾಹುಲ್ ಗಾಂಧಿ, ದೇಶದಲ್ಲಿ ನಿತ್ಯ 30 ಸಾವಿರ ಜನ ಉದ್ಯೋಗ ಕೇಳುತ್ತಿದ್ದಾರೆ. ಆದರೆ ನೀವು ಕೇವಲ 400 ಜನಕ್ಕೆ ಉದ್ಯೋಗ ನೀಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.