ಮುಂಬೈ: ಬಿಲ್ಡರ್ ವೊಬ್ಬರಿಂದ ಮೂರು ಕೋಟಿ ರುಪಾಯಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹೋದರ ಅನೀಶ್ ಇಬ್ರಾಹಿಂ ವಾಂಟೆಡ್ ಆರೋಪಿಗಳು ಎಂದು ತೋರಿಸಿರುವುದಾಗಿ ಥಾಣೆ ಪೊಲೀಸರು ಬುಧವಾರ ತಿಳಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್ ಕಿರಿಯ ಸಹೋದರ ಇಖ್ಬಾಲ್ ಕಸ್ಕರ್ ವಿರುದ್ಧವೂ ಕೇಸ್ ದಾಖಲಿಸಲಾಗಿದೆ.
ಬಿಲ್ಡರ್ ನೀಡಿದ ದೂರಿನ ಆಧಾರದ ಮೇಲೆ ಕಸ್ಕರ್ ಮತ್ತು ದಾವೂದ್ ಗ್ಯಾಂಗ್ ವಿರುದ್ಧ ನಿನ್ನೆ ಥಾಣೆ ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ತನಿಖೆಯ ವೇಳೆ, ಮೂರು ಕೋಟಿ ರುಪಾಯಿ ಸುಲಿಗೆ ದಂಧೆಯಲ್ಲಿ ದಾವೂದ್ ಮತ್ತು ಅನೀಶ್ ಪಾತ್ರವಿರುವುದು ಸ್ಪಷ್ಟವಾಗಿದೆ. ಹೀಗಾಗಿ ಅವರನ್ನು ವಾಂಟೆಡ್ ಆರೋಪಿಗಳು ಎಂದು ತೋರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸುಲಿಗೆ ದಂಧೆಯಲ್ಲಿ ಭಾಗಿಯಾದ ಆರೋಪದ ಮೇಲೆ ಕಳೆದ ತಿಂಗಳು ಕಸ್ಕರ್ ನನ್ನು ಬಂಧಿಸಿದ ನಂತರ ಆತನ ವಿರುದ್ಧ ದಾಖಲಾದ ಮೂರನೇ ಸುಲಿಗೆ ಪ್ರಕರಣ ಇದಾಗಿದೆ.
1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವೂದ್ ಸದ್ಯ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics