ದೇಶ

ದಾವೂದ್ ಭಾರತಕ್ಕೆ ಬರಲು ಪಾಕಿಸ್ತಾನದ ಐಎಸ್ಐ ಬಿಡುವುದಿಲ್ಲ: ಇಕ್ಬಾಲ್ ಕಸ್ಕರ್

Manjula VN
ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತಕ್ಕೆ ಬರಲು ಪಾಕಿಸ್ತಾನದ ಪ್ರಭಾವಿ ಗುಪ್ತಚರ ಸಂಸ್ಥೆ ಐಎಸ್ಐ ಬಿಡುವುದಿಲ್ಲ ಎಂದು ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ಮಂಗಳವಾರ ಹೇಳಿದ್ದಾನೆ. 
1993 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ದಾವೂದ್ ಭಾರತಕ್ಕೆ ಬರಲು ಇಚ್ಛಿಸಿದ್ದ. ಆದರೆ, ಪಾಕಿಸ್ತಾನ ಗುಪ್ತಚರ ಸಂಸ್ಥೆಗಳು ಆತ ಭಾರತಕ್ಕೆ ಬರದಂತೆ ಮಾಡಿದ್ದವು. ದಾವೂದ್ ಭಾರತಕ್ಕೆ ಹೋದರೆ, ಆವರ ರಹಸ್ಯಗಳು ಎಲ್ಲಿ ಬಹಿರಂಗಗೊಳ್ಳುತ್ತದೆಯೇ ಎಂಬ ಭಯದಲ್ಲಿ ಐಎಸ್ಐ ದಾವೂದ್ ಭಾರತಕ್ಕೆ ಮರಳಲು ಬಿಡುತ್ತಿಲ್ಲ ಎಂದು ಕಸ್ಕರ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ. 
2015ರಲ್ಲಿ ದಾವೂದ್ ಕುರಿತಂತೆ ಹೇಳಿಕೆ ನೀಡಿದ್ದ ಹಿರಿಯ ವಕೀಲ ರಾಮ್ ಜೇಠ್ಮಲಾನಿಯವರು ಲಂಡನ್ ನಲ್ಲಿ ನಾವು ದಾವೂದ್ ನನ್ನು ಭೇಟಿ ಮಾಡಿದ್ದೆವು. ಈ ವೇಳೆ ಭೂಗತ ಪಾತಕಿ ಭಾರತಕ್ಕೆ ಬರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದ ಎಂದು ಹೇಳಿದ್ದರು. 
ದಾವೂದ್ ಭಾರತಕ್ಕೆ ಬರಲು ಸಿದ್ಧನಿದ್ದಾನೆ. ಭಾರತಕ್ಕೆ ಮರಳಿದ ಬಳಿಕ ಅಧಿಕಾರಿಗಳು ಎಲ್ಲಿ ಆತನನ್ನು ಜೈಲಿಗೆ ಹಾಕುತ್ತಾರೋ ಎಂಬ ಭಯ ಆತನದಲ್ಲಿದ್ದು, ಆತ ಭಾರತಕ್ಕೆ ಬಂದ ಬಳಿಕ ಅಧಿಕಾರಿಗಳು ಆತನನ್ನು ಗೃಹಬಂಧನದಲ್ಲಿರಿಸಿ ವಿಚಾರಣೆ ನಡೆಸಬೇಕು ಎಂದು ಹೇಳಿದ್ದರು. 
1993ರ ಮುಂಬೈ ದಾಳಿಯಲ್ಲಿ ನನ್ನ ಕೈವಾಡವಿಲ್ಲ ಎಂದಿದ್ದ ದಾವೂದ್ ಭಾರತದ ಅಧಿಕಾರಿಗಳು ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ಕೊಡುವುದಿಲ್ಲ ಎಂದು ಭರವಸೆ ನೀಡಿದರೆ ಮಾತ್ರವೇ ನಾನು ಭಾರತಕ್ಕೆ ಬರುತ್ತೇನೆಂದು ಹೇಳಿಕೊಂಡಿದ್ದ ಎಂದು ತಿಳಿಸಿದ್ದಾರೆ. 
ಹಣ ಸುಲಿಗೆ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಸಹೋದರ ಕಸ್ಕರ್ ನನ್ನು ಮುಂಬೈ ಪೊಲೀಸರು ಸೆ.23 ರಂದು ಬಂಧನಕ್ಕೊಳಪಡಿಸಿದ್ದರು. ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಹಾಗೂ ಮುಂಬೈ ಠಾಣೆ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳು ಕಸ್ಕರ್ ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. 
SCROLL FOR NEXT