ದೇಶ

ವಿವಾದಿತ ಡೊಕ್ಲಾಂ ಗಡಿಯಲ್ಲಿ ಈಗಲೂ ಚೀನಾ ಸೇನೆ ಇದೆ: ವಾಯುಸೇನಾ ಮುಖ್ಯಸ್ಥ ಸ್ಪಷ್ಟನೆ

Manjula VN
ನವದೆಹಲಿ: ಭಾರತ-ಭೂತಾನ್-ಟಿಬೆಟ್ ಮೂರು ದೇಶಗಳ ಗಡಿಗಳು ಸೇರುವ ವಿವಾದಿತ ಚುಂಬಿ ಕಣಿವೆಯಲ್ಲಿ ಈಗಲೂ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿಲ್ಲ ಎಂದು ವಾಯುಸೇನಾ ಮುಖ್ಯಸ್ಥ ಬಿ.ಎಸ್. ಧನೋವಾ ಅವರು ಗುರುವಾರ ಹೇಳಿದ್ದಾರೆ. 
ಭಾರತೀಯ ವಾಯುಪಡೆ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಡೋಕ್ಲಾಮ್ ವಿವಾದವನ್ನು ರಾಜತಾಂತ್ರಿಕ ಮಾರ್ಗದ ಮೂಲಕ ಉಭಯ ರಾಷ್ಟ್ರಗಳು ಇತ್ಯರ್ಥಪಡಿಸಿಕೊಂಡ ಬಳಿಕ ಭಾರತ ವಿವಾದಿತ ಗಡಿಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಆದರೆ, ಚೀನಾ ಮಾತ್ರ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿಲ್ಲ. ಈಗಲೂ ಚೀನಾ ಸೇನೆ ವಿವಾದಿತ ಗಡಿಯಲ್ಲಿದೆ. ಬೇಸಿಗೆ ತರಬೇತಿ ಬಳಿಕ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬಹುದು ಎಂದು ಭರವಸೆ ಇಟ್ಟಿದ್ದೇವೆಂದು ಹೇಳಿದ್ದಾರೆ. 
ಇದೇ ವೇಳೆ ವಾಯುಸೇನಾ ಪಡೆಯ ಸಿದ್ಧತೆ ಕುರಿತಂತೆ ಮಾತನಾಡಿರುವ ಅವರು, ಯಾವುದೇ ಪರಿಸ್ಥಿತಿ, ಸವಾಲುಗಳು ಎದುರಾದರೂ ಅದನ್ನು ಎದುರಿಸಲು, ದಿಟ್ಟ ಉತ್ತರ ನೀಡಲು ನಮ್ಮ ಸೇನಾಪಡೆ ಸಿದ್ಧವಾಗಿದೆ. ಎಂದು ತಿಳಿಸಿದ್ದಾರೆ. 
ಬಳಿಕ ಸೀಮಿತ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ನಡೆಸಲಾದ ಸೀಮಿತ ದಾಳಿ ನಿರ್ಧಾರವನ್ನು ಭಾರತ ಸರ್ಕಾರ ತೆಗೆದುಕೊಳ್ಳಲೇಬೇಕಿತ್ತು. ಎಂತಹುದ್ದೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ವಾಯುಸೇನಾ ಪಡೆ ಸಾಮರ್ಥ್ಯವನ್ನು ಹೊಂದಿದೆ. ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲೇ ಪೂರ್ಣ ಪ್ರಮಾಣದಲ್ಲಿ ದಾಳಿ ನಡೆಸುವ ಸಾಮರ್ಥ್ಯ ವಾಯುಸೇನಾ ಪಡೆಗಳಿಗೂ ಇದೆ. 
ಶಾಂತಿಯುತ ವಾತಾವರಣದಲ್ಲಿಯೂ ಯೋಧರನ್ನು ಕಳೆದುಕೊಳ್ಳುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಅಪಘಾತಗಳಂತಹ ಘಟನೆಗಳು ಹಾಗೂ ನಮ್ಮ ಸ್ವತ್ತುಗಳನ್ನು ಸಂರಕ್ಷಿಸಿಕೊಳ್ಳಲು ಸಾಕಷ್ಟು ಶ್ರಮಗಳನ್ನು ಪಡಲಾಗುತ್ತಿದೆ ಎಂದಿದ್ದಾರೆ. 
SCROLL FOR NEXT