ದೇಶ

ವಿಐಪಿ ಸಂಸ್ಕೃತಿ ಇತಿಶ್ರೀ ಹೇಳಿದ ಭಾರತೀಯ ರೈಲ್ವೆ ಸಚಿವಾಲಯ

Sumana Upadhyaya
ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಇಲ್ಲಿಯವರೆಗೆ ಮೇಲಾಧಿಕಾರಿಗಳಿಗೆ ನೀಡಲಾಗುತ್ತಿದ್ದ ವಿಐಪಿ ಸಂಸ್ಕೃತಿ ಶಿಷ್ಟಾಚಾರ ತೆಗೆದು ಹಾಕುವಂತೆ ರೈಲ್ವೆ ಸಚಿವಾಲಯ ಹೊಸ ನಿಯಮ ಜಾರಿಗೆ ತಂದಿದೆ.
ಈ ಮೂಲಕ ಭಾರತೀಯ ರೈಲ್ವೆಯಲ್ಲಿ 36 ವರ್ಷಗಳಿಂದ ಇದ್ದ ವಿಐಪಿ ಸಂಸ್ಕೃತಿ ಕೊನೆಯಾಗಲಿದೆ. ರೈಲ್ವೆ  ವಲಯ ಭೇಟಿ ಸಂದರ್ಭದಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಇತರ ಸದಸ್ಯರು ಆಗಮಿಸುವ ಮತ್ತು ನಿರ್ಗಮಿಸುವ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕರು ತಮ್ಮನ್ನು ತಾವು ಪ್ರಸ್ತುತಪಡಿಸುವುದು, ಕಡ್ಡಾಯವಾಗಿತ್ತು. ಈ ಮೂಲಕ 1981ರಲ್ಲಿ ಹೊರಡಿಸಲಾಗಿತ್ತ ಸುತ್ತೋಲೆಗೆ ಪ್ರಮುಖ ಬದಲಾವಣೆ ತರಲು ರೈಲ್ವೆ ಸಚಿವಾಲಯ ಮುಂದಾಗಿದೆ. 
ಕಳೆದ ಸೆಪ್ಟೆಂಬರ್ 28ರಂದು ನೀಡಿರುವ ಆದೇಶದ ಪ್ರಕಾರ, ವಿಐಪಿ ಸಂಸ್ಕೃತಿ ಶಿಷ್ಟಾಚಾರಕ್ಕೆ ಸಂಬಂಧಪಟ್ಟಂತೆ ರೈಲ್ವೆ ಇಲಾಖೆ ಹೊರಡಿಸಿದ ಮಾರ್ಗಸೂಚಿ ಮತ್ತು ಸಲಹೆಗಳನ್ನು ವಿಮಾನ ನಿಲ್ದಾಣಗಳನ್ನು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷರು ಮತ್ತು ಇತರ ಸದಸ್ಯರ ಭೇಟಿ ಸಂದರ್ಭದಲ್ಲಿ ಈ ತಕ್ಷಣದಿಂದಲೇ ಅನುಸರಿಸಬೇಕು ಎಂದು ಸೂಚಿಸಲಾಗಿದೆ.
ಯಾವುದೇ ಅಧಿಕಾರಿಗಳಿಗೆ ಇನ್ನು ಮುಂದೆ ಬೊಕ್ಕೆಗಳನ್ನು ಮತ್ತು ಉಡುಗೊರೆಗಳನ್ನು ಯಾವುದೇ ಸಂದರ್ಭದಲ್ಲಿಯೂ ನೀಡುವಂತಿಲ್ಲ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೊಹನಿ ಹೇಳಿದ್ದಾರೆ.
ಭಾರತೀಯ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಈ ನಿಯಮವನ್ನು ಕೇವಲ ಕಚೇರಿಯಲ್ಲಿ ಮಾತ್ರವಲ್ಲದೆ ಮನೆಗಳಲ್ಲಿ ಕೂಡ ಪಾಲಿಸಬೇಕು. ತಮ್ಮ ಮನೆಗಳಲ್ಲಿ ರೈಲ್ವೆ ಇಲಾಖೆಯ ಸಿಬ್ಬಂದಿಯನ್ನು ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದರೆ ತಕ್ಷಣವೇ ಅವರಿಗೆ ಮುಕ್ತಿ ನೀಡಬೇಕೆಂದು ಕೂಡ ಸೂಚಿಸಲಾಗಿದೆ.
ಸುಮಾರು 30,000 ಟ್ರ್ಯಾಕ್ ಮೆನ್ ಗಳು ಹಿರಿಯ ಅಧಿಕಾರಿಗಳ ನಿವಾಸದಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ಬಿಡುಗಡೆ ನೀಡಿ ಇಲಾಖೆಯಲ್ಲಿಯೇ ಕೆಲಸ ಮಾಡುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. 
ಇತ್ತೀಚೆಗೆ ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ದುಬಾರಿ ವರ್ಗದ ರೈಲ್ವೆ ಬೋಗಿಗಳಲ್ಲಿ ಪ್ರಯಾಣಿಸುವುದನ್ನು ಬಿಟ್ಟು ಸ್ಲೀಪರ್ ಮತ್ತು ಎಸಿ ತ್ರಿ ಟಯರ್ ವರ್ಗದ ಬೋಗಿಗಳಲ್ಲಿ ಪ್ರಯಾಣಿಸುವಂತೆ ಸೂಚಿಸಿದ್ದರು.
SCROLL FOR NEXT